ಗುರುವಾರ, ಜನವರಿ 19, 2012

ಸಾಬಕ್ಕಿ(ಸಾಬುದಾನೆ) ಇಡ್ಲಿ

ಸಾಬಕ್ಕಿ(ಸಾಬುದಾನೆ) ಇಡ್ಲಿ ...ಇದನ್ನ ಯಾರ ಮುಂದೆ ಹೇಳಿದರು ಹೊಸದು ಎಂಬ ಉದ್ಗಾರ ಬಂದಿತ್ತು ,ಸಾಬುದಾನೆ ಇಡ್ಲಿ ನಾನು ಮೊತ್ತ ಮೊದಲು ಸವಿದಿದ್ದು ಧಾರವಾಡ ದಲ್ಲಿ ನಾನು ಪೇಯಿಂಗ್ ಗೆಸ್ಟ್ ಆಗಿ ಇದ್ದ ದುರ್ಗಾ ಶಾನಭಾಗ್ ಅವರ ಮನೆಯಲ್ಲಿ ,ಸಾಬುದಾನೆ ಇಡ್ಲಿಯೊಂದಿಗೆ ಹೀರೆಕಾಯಿ ಸಿಪ್ಪೆಯ ಚಟ್ನಿ ಮ್ಯಾಚಿಂಗು,,,ನಿಮ್ಮ ಬ್ರೇಕ್ ಫಾಸ್ಟ್ ಲಿಸ್ಟ್ ನಲ್ಲಿ ಈ ಹೊಸತಿಂಡಿಗೊಂದು ಅವಕಾಶ ಕೊಟ್ಟು ನೋಡಬಾರದೇಕೆ.???

ಬೇಕಾಗುವ ಸಾಮಗ್ರಿಗಳು

೧/೪ ಸಾಬಕ್ಕಿ,
೩ ಚಮಚ ಚಿರೋಟಿ ರವೆ
೧ ಕಪ್ ಮಜ್ಜಿಗೆ/ಮೊಸರು
೧ ಈರುಳ್ಳಿ
೧ ಟೊಮೇಟೊ
ಸ್ವಲ್ಪ ನೆಲಗಡಲೆ ಬೀಜ (ಶೇಂಗ )
ಸಣ್ಣ ಚೂರು ಶುಂಟಿ ,
ಒಂದು ಹಸಿಮೆಣಸು
೧/೨ ಚಮಚ ಜೀರಿಗೆ
ಸ್ವಲ್ಪ ಒಣ ದ್ರಾಕ್ಷಿ ,ಗೋಡಂಬಿ
ಹಸಿ ಬಟಾಣಿ ,ಕ್ಯಾರೆಟ್ ,ಕಾರ್ನ್ ನಿಮಗೆ ಬೇಕೆನಿಸಿದಷ್ಟು,
ಕೊತ್ತಂಬರಿಸೊಪ್ಪು ಸ್ವಲ್ಪ
ಉಪ್ಪು ರುಚಿಗೆ

 ಮಾಡುವ ವಿಧಾನ

೧.ಸಾಬಕ್ಕಿ +ಶುಂಟಿ +ನೆಲಗಡಲೆ +ಜೀರಿಗೆ+ರವೆ   ಇವಿಷ್ಟನ್ನು ರಾತ್ರಿ ಮೊಸರು/ಮಜ್ಜಿಗೆಯಲ್ಲಿ ನೆನೆಸಿಡಿ .
೨.ಮುಂಜಾನೆ ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಟೊಮೇಟೊ ,ಕೊತ್ತಂಬರಿಸೊಪ್ಪು,ಹಸಿ ಬಟಾಣಿ ,ಕಾರ್ನ್,ದ್ರಾಕ್ಷಿ ,ಗೋಡಂಬಿ ಉಪ್ಪು ಎಲ್ಲವನ್ನು ಸೇರಿಸಿ,
೩,ಈಗ ಇಡ್ಲಿ ಅಟ್ಟ/ಕುಕ್ಕರ್ ನಲ್ಲಿ   ೧೫ -೧೭ ನಿಮಿಷಗಳ ಕಾಲ ಬೇಯಿಸಿ ಈ ಪ್ರಮಾಣದಲ್ಲಿ ೧೬ ಇಡ್ಲಿಗಳನ್ನು ತಯಾರಿಸಬಹುದು.

ಉಪವಾಸ ವಾರ,ಒಪ್ಪತ್ತಿನಲ್ಲಿ ಹೆಚ್ಹಾಗಿ ಸಾಬಕ್ಕಿ/ಸಬ್ಬಕ್ಕಿ /ಸಾಬುದಾನೆ ಬಳುಸುತ್ತಾರೆ ಖೀರು ಉಸಲಿ ಗೆ ಬದಲಾಗಿ ಈದನ್ನು ನೀವು ಪ್ರಯೋಗಿಸಬಹುದು ,ಆಗ ಈರುಳ್ಳಿ ಯನ್ನು ಹಾಕದಿದ್ದರೆ ಆಯಿತು,ರಾತ್ರಿಯೇ ನೆನೆಸಬೇಕೆನ್ದೆನು ಇಲ್ಲ ೪-೬ ಘಂಟೆಗಳಷ್ಟು ಸಾಬಕ್ಕಿ ನೆಂದರಾಯಿತು,

ಸಾಬಕ್ಕಿ ಇದರ ಮೂಲ..

ಸಾಬುದಾನೆ ,ಸಬ್ಬಕ್ಕಿಯನ್ನು ನಾನು ಚಿಕ್ಕಂದಿನಿಂದಲೂ ತುಂಬಾ ಇಷ್ಟ ಪಡುತಿದ್ದೆ,ಅದರ ಪಾಯಸವನ್ನು ಗುಳ್ಳಿ ಪಾಯಸ ಅನ್ನೋದು ನಮ್ಮಅಭ್ಯಾಸವಾಗಿತ್ತು,ಆದರೆ ಅದನ್ನು ಯಾವುದರಿಂದ ತಯಾರಿಸುತ್ತಾರೆ ಎಂಬುದು ಮಾತ್ರ ನನಗೆ  ಕುತೂಹಲ ಹುಟ್ಟಿಸಿದ ವಿಷಯ ,
ಸಬ್ಬಕ್ಕಿಯನ್ನು ಮರಗೆಣಸು,ಅಥವಾ ಕಪ್ಪಗಡ್ಡೆ,topica root , ಎಂದು ಕರೆಯಲ್ಪಡುವ ಕಂದಮೂಲದಿಂದ ತೆಗೆದ ಹಿಟ್ಟಿನಿಂದ ತಯಾರಿಸುತ್ತಾರೆ  ಇದೊಂಥರ ಕುವೆ ಹಿಟ್ಟನ್ನು ತಯಾರಿಸಿದಂತೆ ,ನಿಮಗೆ ಈ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದಾರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ..

ಇಲ್ಲದಿದ್ದರೆ ಇಡ್ಲಿ ಮಾಡಿ ,ತಿನ್ನುವಾಗ ನನ್ನ ಒಮ್ಮೆ ನೆನಪಿಸಿಕೊಳ್ಳಿ...


http://www.sabuindia.com/sago2.htm

ಟೊಮೇಟೊ ಸಂತೋಷ್

ಅಯ್ಯೋ ಇದೆಂತ ಹೆಸರು ,ಟೊಮೇಟೊ ಸಂತೋಷ್??ಈ ಪದಾರ್ಥವನ್ನು ನೆಂಜಿಕೊಂಡ ಕೂಡಲೇ ಉಂಟಾದ ಭಾವವವನ್ನೇ ಈ  ರೆಸಿಪಿ ಗೆ ಕೊಟ್ಟಿರಬಹುದು ಅನ್ನೋದು ನನ್ನ ಅನಿಸಿಕೆ..
ತುಂಬಾ ಹಳೆಯ ರೆಸಿಪಿ ಇದು ಅಂತ ಅಮ್ಮ ನನ್ನ ಅತ್ತೆ ಎಲ್ಲರು ಹೇಳಿದರು ಆದರು ನನಗೆ ಯಾವತ್ತು ಸವಿದ ನೆನಪಿರಲಿಲ್ಲ ,ಬ್ಲಾಗ್ ಗೆಳತಿ ನಿಯಾ ಈ ಅಡಿಗೆಯ ಫೋಟೋ ಪೋಸ್ಟ್ ಮಾಡೋ ತನಕ ಈ ಸಂತೋಷ್ ನನ್ನಿಂದ ದೂರವಿದ್ದದ್ದು ಹೇಗೆ??ಎಂಬುದರ ಬಗ್ಗೆ ನನಗೆ ಆಶ್ಚರ್ಯವಿದೆ.
ದೋಸೆ ಚಪಾತಿ ಗಳಿಗೆ ಮಾಮೂಲು ಭಾಜಿ ,ಪಲ್ಯಗಳನ್ನು ಜೊತೆ ಮಾಡಿ ಮಾಡಿ ಬೇಸರ ಬಂದಿದ್ದರೆ ಟೊಮೇಟೊ ಸಂತೋಷ ನಿಮಗೆ ಬೆಸ್ಟ್ ಚಾಯ್ಸ್ .

ಸಂತೋಷ್ ಗೆ ಬೇಕಾದ ಸಾಮಗ್ರಿಗಳು.

೧/೨ ಕೆಜಿ ಟೊಮೇಟೊ 
೨ ಹದಗಾತ್ರದ  ಈರುಳ್ಳಿ 
೧/೨ ಕಪ್ ಹಸಿ ಕೊಬ್ಬರಿ ತುರಿ
೧/೪ ಚಮಚ ಅರಿಶಿನ 
೨ ಚಮಚ ಒಣಮೆಣಸಿನ ಪುಡಿ 
ರುಚಿಗೆ ಉಪ್ಪು,
ಒಗ್ಗರಣೆಗೆ 
ಮೆಂತೆ ,ಜೀರಿಗೆ ,ಸಾಸಿವೆ. ಕರಿಬೇವು ,ಒಣಮೆಣಸು 
ಎಣ್ಣೆ .

ಮಾಡುವ ವಿಧಾನ .
೧.ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ 
೨.ಟೊಮೇಟೊ ಗಳನ್ನೂ (೧-೪  ರಂತೆ )ಹೆಚ್ಚಿಕೊಳ್ಳಿ 
೩.ಸ್ವಲ್ಪ ಎಣ್ಣೆಯಲ್ಲಿ ಘಮ ಬರುವತನಕ ಈರುಳ್ಳಿಯನ್ನು ಬಾಡಿಸಿ(ಒಗ್ಗರಣೆಗು ಎಣ್ಣೆ ಬಳಸುವುದರಿಂದ ಸ್ವಲ್ಪವೇ ಸಾಕು)
೪.ಹಸಿ ಕೊಬ್ಬರಿ+ಅರಿಶಿನ +ಒಣಮೆಣಸಿನ ಪುಡಿ ಈ ಮೂರನ್ನು ಸ್ವಲ್ಪ ನೀರಿನೊಂದಿಗೆ  ನುಣ್ಣನೆ ರುಬ್ಬಿಕೊಳ್ಳಿ 
೫.ಹುರಿದ ಈರುಳ್ಳಿಗೆ ಟೊಮೇಟೊ ಸೇರಿಸಿ  ಮತ್ತು ಉಪ್ಪು ಸಿಂಪಡಿಸಿ ಮುಚ್ಚಳ ಮುಚ್ಚಿ .
೬,ಬೆಂದ ಟೊಮೇಟೊ ಹೊಳುಗಳಿಗೆ ತಯಾರಿಸಿಕೊಂಡ ಮಸಾಲೆ ಸೇರಿಸಿ ಮತ್ತು ಎರಡು ಹೊಂದಿಕೊಳ್ಲೋ ತನಕ ಚನ್ನಾಗಿ ಕೈಯ್ಯಾಡಿಸಿ,
೭,ಮಸಾಲೆ ಟೊಮೇಟೊ ಎರಡು ಹೊಂದಿಕೊಂಡು ತಳ ಬಿಡಲು ಶುರುಮಾಡಿದಾಗ ,ಮೆಂತೆ ,ಸಾಸಿವೆ ,ಜೀರಿಗೆ ಕರಿಬೇವು ಕ್ರಮವಾಗಿ ಸೇರಿಸಿ ಒಗ್ಗರಣೆ ಕೊಡಿ.
ನಿಮಗೆ ಸಿಹಿ ಇಷ್ಟವಿದ್ದರೆ  ಬೆಲ್ಲವನ್ನು ಸೇರಿಸಬಹುದು.ರುಚಿಗೆ ತಕ್ಕಂತೆ ಉಪ್ಪು ಖಾರವನ್ನು ಹೊಂದಿಸಿಕೊಳ್ಳಬಹುದು.
.ದೋಸೆ ಚಪಾತಿಗೆ ನೆಂಜಿಕೊಂಡು ತಿನ್ನುವಾಗ,,ಸಂತೋಷದಿಂದ ನನ್ನನ್ನೊಮ್ಮೆ ನೆನೆಸಿಕೊಂಡರೆ ನನಗೂ ಸಂತೋಷ.




ಕೊರ್ಜೆಟ್(ಜುಕುನಿ )ರಸಪಲ್ಲೇ.


ಕೊರ್ಜೆಟ್(ಜುಕುನಿ )ರಸಪಲ್ಲೇ.
ಕೊರ್ಜೆಟ್ ಅಥವಾ ಜ್ಹುಕುನಿ  ಎಂಬುದು ಬೇಸಿಗೆಯಲ್ಲಿ ಬೆಳೆಯುವ ಒಂದು ಬಳ್ಳಿ ತರಕಾರಿ ,ಇದು ಸೌತೆಯ ಹೈಬ್ರೀಡ್ ತಳಿಯು ಹೌದು.ಮೂಲತಃ ಅಮೇರಿಕಾದ ತರಕರಿಯಾದರು ಇದು ಸಾಕಷ್ಟು ಜನಪ್ರಿಯತೆ ಪಡೆದಿದ್ದು  ಇಟಲಿ ಯಲ್ಲಿ ,ಕಡಿಮೆ ಕ್ಯಾಲೋರಿ ಇರುವುದರಿಂದ ಡಯಟ್ ಪ್ರಿಯರ ಮೆಚ್ಹಿನ ತರಕಾರಿ ಇದಾಗಿದೆ )

ಬೇಕಾಗುವ ಪದಾರ್ಥಗಳು 
೨ ರಿಂದ ೩ ಜುಕುನಿ 
೧/೨ ಕಪ್ ಕಡಲೆಬೇಳೆ (ನೀರಿನಲ್ಲಿ ನೆನೆಸಿದ್ದು )
೧ ಚಮಚ ಬೆಳ್ಳುಳ್ಳಿ ಶುಂಟಿ ಪೇಸ್ಟ್ 
೨ ಈರುಳ್ಳಿ 
೨ ಹದ ಗಾತ್ರದ ಟೊಮೇಟೊ 
೧/೨ ಚಮಚ ಕಿಚನ್ ಕಿಂಗ್ ಮಸಾಲೆ
೧.೧/೨ ಚಮಚೆ ಕೆಂಪು ಮೆಣಸಿನ ಪುಡಿ. 
೧/೨ ಚಮಚೆ ಜೀರಿಗೆ 
೪ ಚಮಚ ಎಣ್ಣೆ.
ಮಾಡುವ ವಿಧಾನ -
 ೧.ಜುಕುನಿಯನ್ನು ಹದ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.
೨ ,ಈರುಳ್ಳಿ ಮತ್ತು ಟೊಮೇಟೊ ವನ್ನು  ಸಣ್ಣದಾಗಿ ಹೆಚ್ಚಿ ಕೊಳ್ಳಿ 
೩. ಬಾಣಲೆ ಅಥವಾ ಪ್ರೆಶರ್ ಕುಕ್ಕರಿನಲ್ಲಿ ಎಣ್ಣೆ ಬಿಸಿಗಿಟ್ಟು  ಜೀರಿಗೆ ಹಾಕಿ.
೪,ಜೀರಿಗೆ ಕೆಂಪಗಾದ ನಂತರ ಈರುಳ್ಳಿ,ಶುಂಟಿ ,ಬೆಲ್ಲುಲ್ಲು ಪೇಸ್ಟ್ ಹಾಕಿ ಘಮ ಬರುವ ತನಕ ಹುರಿಯಿರಿ 
೫,ಜುಕುನಿ ಮತ್ತು ಕಡಲೆಬೇಳೆ ಯನ್ನು ಬಾಣಲೆಗೆ ಹಾಕಿ..ಕೈಯ್ಯಾಡಿಸಿ.
೬.ಕೆಂಪು ಮೆಣಸಿನ ಪುಡಿ,ಕಿಚನ್ ಕಿಂಗ್ ಮಸಾಲೆ,ಮತ್ತು ಟೊಮೇಟೊ ಸೇರಿಸಿ.ಸ್ವಲ್ಪ ನೀರನ್ನೂ ಸೇರಿಸಿ 
೭,ಕೊನೆಯಲ್ಲಿ ಉಪ್ಪು ಸೇರಿಸಿ.೨ ವಿಸಿಲ್ ತರಿಸಿ.ಅಥವಾ ಕಡಲೆ ಬೇಳೆ ಬೇಯುವ ತನಕ ಉರಿಯನ್ನು ಆರಿಸಬೇಡಿ.
ಈಗ ರಸಪಲ್ಲೇ ಸಿದ್ಧ .ಇದು ಬಿಸಿ ಅನ್ನದೊಂದಿಗೆ ಒಳ್ಳೆಯ ಜೊತೆ.ಹಾಗೆ ಚಪಾತಿ ಒಡನೆಯೂ ರುಚಿಸುತ್ತದೆ.
ಜುಕುನಿ ಬದಲು ಸೌತೆ ಕಾಯಿ,ಹೀರೆ ಕಾಯಿ ,ತುಪ್ಪೀರೆ ಕಾಯಿ ,ಮೊಗೆ ಕಾಯಿ ಗಳನ್ನು ರಸವತ್ತಾದ ರಸಪಲ್ಲೆಗೆ ಬಳಸ ಬಹುದು.

ಬಟರ್ ನಟ್ ಸ್ಕ್ವಾಶ್ ಉಸಲಿ


ಬಟರ್ ನಟ್ ಸ್ಕ್ವಾಶ್  ಉಸಲಿ 
( ಇದು ನಮ್ಮ ನಾಡಿನ ಸಿಹಿ ಗುಂಬಳದ ಪ್ರಜಾತಿಗೆ ಸೇರಿದ್ದು.ರುಚಿಯು ಅದೇ ಆಕಾರ ಮಾತ್ರ ಪುಂಗಿ ಕಾಯಿಯನ್ನು ನೆನಪಿಸುತ್ತೆ.ಇದು ಚಳಿಗಾಲದಲ್ಲಿ ಬೆಳೆಯುವ ಕುಂಬಳ ,ವಿಟಮಿನ್  ಎ .ಮತ್ತು ಬೀಟಾ ಕ್ಯಾರೋಟಿನ್ ಗಳು ಭಂಡಾರ ಇದು.ಸಿಹಿ ಕುಮ್ಬಲದಲ್ಲಿ ಮಾಡುವ ಎಲ್ಲ ಬಗೆಯನ್ನು ಇದರಲ್ಲೂ ಮಾಡಬಹುದು.)
ಬೇಕಾಗುವ ಪದಾರ್ಥ 
೧.ಬಟರ್ ನಟ್  ಸ್ಕ್ವಾಶ್
೩ ಹಸಿಮೆಣಸಿನ ಕಾಯಿ 
೧/೪ ಬಟ್ಟಲು ಹಸಿ ಕ್ಹೊಬ್ಬರಿ ತುರಿ 
ಚಿಟಿಗೆ ಇಂಗು 
ಚಿಟಿಕೆ ಅರಿಶಿನ 
೧ ಟೊಮೇಟೊ 
ರುಚಿಗೆ ಉಪ್ಪು 
ಒಗ್ಗರಣೆಗೆ ,ಜೀರಿಗೆ ,ಸಾಸಿವೆ ,ಕರಿಬೇವು,ಒಣಮೆಣಸು 
ಮಾಡುವ ವಿಧಾನ 

೧. ಬಟರ್ ನಟ್  ಸ್ಕ್ವಾಶ್ ನ್ನು ಐಸ್ ಕ್ಯೂಬ್ ಗಾತ್ರಕ್ಕೆ ಹೆಚ್ಚಿಕೊಳ್ಳಿ ,ಟೊಮೇಟೊ ಕೂಡ ಇದೆ ಗಾತ್ರದಲ್ಲಿ ಹೆಚ್ಚಿ 

೨.ಬಾಣಲೆ ಯಲ್ಲಿ ಎಣ್ಣೆ ಹಾಕಿ  ಮೊದಲು ಸಾಸಿವೆ ಹಾಕಿ ಸಿಡಿದ ನಂತರ ಜೀರಿಗೆ ಕರಿಬೇವು, ಒಣಮೆಣಸು, ಮತ್ತು ಹೆಚ್ಹಿದ ಹಸಿಮೆಣಸು ,ಅರಿಶಿನ ಬೆರೆಸಿ ಕೈಯ್ಯಾಡಿಸಿ 
೩ ,ಈಗ ಬಟರ್ ನಟ್  ಸ್ಕ್ವಾಶ್ ಹಾಕಿ ಉಪ್ಪು ಹಾಕಿ..ಬಾಣಲೆ ಯನ್ನು ಮುಚ್ಹಿ.
೪.ಇಂಗನ್ನು ನೀರಿನಲ್ಲಿ   ಸ್ವಲ್ಪ  ಕಾಲ   ನೆನೆಸಿ  ಇಂಗಿನ ನೀರನ್ನು ಮಾಡಿಟ್ಟುಕೊಳ್ಳಿ .
೫.ಈಗ ಟೊಮೇಟೊ ಮತ್ತು ಇಂಗಿನ ನೀರನ್ನು ಸೇರಿಸಿ. ಅಗತ್ಯವಿದ್ದರೆ ಮಾತ್ರ ನೀರು ಸೇರಿಸಿ.ಸಣ್ಣ ಉರಿಯಲ್ಲಿ ಬೇಯಿಸಿ.
೬.ಉರಿ ಆರಿಸುವ ಮುನ್ನ ಕೊಬ್ಬರಿ ತುರಿ ಸೇರಿಸಿ.
ಈಗ ಬಟರ್ ನಟ್  ಸ್ಕ್ವಾಶ್ ಉಸಲಿ ತಯಾರ್.ಇದನ್ನು ಉಪವಾಸ ವಾರ,ಒಪ್ಪತ್ತು ಗಳಲ್ಲಿ ಫಳಾರ ದ ರೂಪದಲ್ಲೂ ಸೇವಿಸಬಹುದು.ಪಲ್ಯ ದಂತೆ ಅನ್ನ ಚಪಾತಿ ಗಳೊಂದಿಗು ಸವಿಯಬಹುದು.
ಗೆಣಸು ,ಆಲುಗಡ್ಡೆ ,ಮತ್ತು ಸಿಹಿಕುಂಬಳಕಾಯಿ ಬಟರ್ ನಟ್  ಸ್ಕ್ವಾಶ್ ಗೆ ಬದಲಾಗಿ ಉಸಲಿ ಯಲ್ಲಿ ಬಲಸ ಬಹುದಾದಂಥ ತರಕಾರಿಗಳು.

(ವಿಜಯ್ ನೆಕ್ಷ್ತ  ಮ್ಯಾಗಜಿನ್ ನಲ್ಲಿ ಪ್ರಕಟಿತ )

ಬೇಬಿ ಕ್ಯಾಬೇಜ್ ತುಂಬುಗಾಯಿ


೩.ಬೇಬಿ ಕ್ಯಾಬೇಜ್  ತುಂಬುಗಾಯಿ
(Brussels sprouts  ಎಂದು ಕರೆಯಲ್ಪಡುವ ಈ ತರಕಾರಿ ಕಾಡು ಕ್ಯಾಬೇಜ್ ಕೂಡ ಹೌದು.ರುಚಿಯಲ್ಲೂ ಕ್ಯಾಬೇಜ್ ನ್ನೇ ಹೋಲುತ್ತದೆ.ಮತ್ತು ರೂಪದಲ್ಲೂ ಸಾಮ್ಯತೆ ಇರುವುದರಿಂದ ಇದನ್ನು ಬೇಬಿ ಕ್ಯಾಬೇಜ್ ಅನ್ನುವುದೇ ಸೂಕ್ತ .ಇದು ಬೆಲ್ಜಿಯಂ ದೇಶದ ತರಕಾರಿ ,ಕ್ಯಾನ್ಸೆರ್ ರೋಗವನ್ನು ತಡೆಯುವ ಶಕ್ತಿಯನ್ನು ಈ ತರಕಾರಿ ಹೊಂದಿದೆ.  ತುಂಬಾ ಸುಲಭ ವಾಗಿ ಬೇಯುತ್ತದೆ ಆದ್ದರಿಂದ.ಇದನ್ನು ಹಾಗೆ ಬೇಯಿಸಿ ,ಗ್ರಿಲ್ ಮಾಡಿ  ಇಲ್ಲಿಜ ಜನ ಇದನ್ನು ಸೇವಿಸುತ್ತಾರೆ )

ಬೇಕಾಗುವ ಪದಾರ್ಥ.
೧/೨  ಕೆ ಜಿ ಬೇಬಿ ಕ್ಯಾಬೇಜ್ 
೨ ಈರುಳ್ಳಿ 
೧/೨ ಬಟ್ಟಲು ಒಣಕೊಬ್ಬರಿ ಅಥವಾ ಹಸಿ ಕ್ಹೊಬ್ಬರಿ ತುರಿ
೧/೪ ಬಟ್ಟಲು ಶೇಂಗ ಪುಡಿ (ಹುರಿದು ಪುಡಿಮಾಡಿದ್ದು)
೨ ಚಮಚ ಸಾಂಬಾರ್ ಪುಡಿ/ಗರಂ ಮಸಾಲ 
೪ ಚಮಚ ಕೆಂಪು ಮೆಣಸಿನ ಪುಡಿ 
ರುಚಿಗೆ ಬೆಲ್ಲ ,ಉಪ್ಪು ,ಮತ್ತು ಹುಣಸೆ ರಸ 
ಒಗ್ಗರಣೆಗೆ -ಉದ್ದಿನ ಬೇಳೆ ,ಸಾಸಿವೆ ಕರಿಬೇವು, ಎಣ್ಣೆ 

ಮಾಡುವ ವಿಧಾನ -
೧.ಪುಟ್ಟ ಕ್ಯಾಬೇಜ್ ಗಳನ್ನು ನಾಲ್ಕು ಭಾಗಗಳಾಗಿ ಸೀಳು ಮಾಡಿ ನೀರಿನಲ್ಲಿ ಹಾಕಿಡಿ 
೨.ಏರುಲ್ಲಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ 
3.ಕೊಬ್ಬರಿ ,ಶೇಂಗ ಪುಡಿ ,ಗರಂ ಮಸಾಲೆ ,ಮೆಣಸಿನ ಪುಡಿ ಬೆಲ್ಲ ,ಉಪ್ಪು.ಹುಣಸೆರಸ ಇವನ್ನು ಹೆಚ್ಚಿದ ಈರುಳ್ಳಿಯೊಂದಿಗೆ ಚನ್ನಾಗಿ ಕಲಸಿ ಒಂದು ಮಸಾಲೆ ಸಿದ್ದಮಾಡಿ ಕೊಳ್ಳಿ.
೪ .ನೀರಲ್ಲಿ ಹಾಕಿಟ್ಟ ಬೇಬಿ ಕ್ಯಾಬೇಜ್ ಗಳ ಮಧ್ಯ ಈ ಮಸಾಲೆಯನ್ನು ತುಂಬಿ ,
೫.ಬಾಣಲೆಯಲ್ಲಿ ಎಣ್ಣೆ ಹಾಕಿ ಉದ್ದಿನ ಬೇಳೆ,ಸಾಸಿವೆ ,ಕರಿಬೇವುಗಳನ್ನು ಒಗ್ಗರಣೆ ಮಾಡಿಕೊಂಡು.ಅದರಲ್ಲಿ ತುಂಬಿದ ಬೇಬಿ ಕ್ಯಾಬೇಜ್ ಗಳನ್ನು ಮೇಲ್ಮುಖವಾಗಿ ಇಡುತ್ತ ಹೋಗಿ.
೬.ಮಸಾಲೆಯಲ್ಲಿ ಉಪ್ಪು ಹಾಕಿರುವುದರಿಂದ.ಕ್ಯಾಬೇಜ್ ನ ಹೊರ ಆವರಣಕ್ಕೆ ಬೇಕಾಗುವ ಸ್ವಲ್ಪ ಪ್ರಮಾಣದ ಉಪ್ಪು ಹಾಕಿ.ಬಾಣಲೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ೧೫ ರಿಂದ ೨೦ ನಿಮಿಷ ಬೇಯಿಸಿ.
ರುಚಿ ರುಚಿ ಬ್ರುಸ್ಸೇಲ್ ಸ್ಪ್ರೋಟ್ಸ (ಬೇಬಿ  ಕ್ಯಾಬೇಜ್) ತುಂಬುಗಾಯಿ ಸಿದ್ಧ ,ಇದನ್ನು ರೊಟ್ಟಿ/ ಚಪಾತಿಗಳಿಗೆ ಇದು ಒಳ್ಳೆಯ ಸಂಗಾತಿ .
 ತುಂಬುಗಾಯಿ ಮಾಡಲು ಎಲೆ ಬದನೇಕಾಯಿ,ಹಾಗಲ ಕಾಯಿ,ಹೀರೆಕಾಯಿ,ಗಳನ್ನು ಬಳಸಬಹುದು..ತರಕಾರಿ ಬದಲಾದಂತೆ ರುಚಿಯು ಕೊಂಚ ಬದಲಾಗುತ್ತದೆ ಹಾಗಲಕಾಯಿ ತುಮ್ಬುಗಾಯಿಗೆ ಬೆಲ್ಲ ಸ್ವಲ್ಪ ಜಾಸ್ತಿ ಹಿಡುಯುತ್ತದೆ 

ಬ್ರೋಕುಲಿ ಸುಕ್ಕೆ


.ಬ್ರೋಕುಲಿ ಸುಕ್ಕೆ 
(ಬ್ರೋಕುಲಿ ನೋಡಿದ ಕೂಡಲೇ ಅದ್ಯಾವುದೋ ಬೋನ್ಸಾಯ ವೃಕ್ಷ ನಮ್ಮ ಮುಂದಿದೆಯೇ ಅನಿಸಿತ್ತದೆ.ಇದನ್ನು ಹಸಿರು ಹೂ ಕೋಸು ಎಂದರೂ ತಪ್ಪಲ್ಲ ,ಇದು ಮೂಲತಃ ಇಟಲಿ ದೇಶದ ತರಕಾರಿ ,ಇದರಲ್ಲಿ  ಕ್ಯಾನ್ಸೆರ್ ರೋಗ ವನ್ನು ತಡೆಗಟ್ಟುವ ಅಂಶ ಗಳನ್ನು ಗುರುತಿಸಿದ್ದಾರೆ.ಹೃದಯ ಸಂಭಂದಿ ಖಾಯಿಲೆಗಳು ಕೂಡ ಇದರಿಂದ ತಹಬಧಿಗೆ ಬರುತ್ತವೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ.ರುಚಿ ಯಲ್ಲೂ ಇದು ಹಿತವಾದದ್ದು)

ಬೇಕಾಗುವ ಸಾಮಗ್ರಿ.
 ೧ ಬ್ರೋಕುಲಿ
೧ ಬಟ್ಟಲು ಕ್ಹೊಬ್ಬರಿ ತುರಿ
೨ ಚಮಚ ಕೆಂಪು ಮೆಣಸಿನ ಹುಡಿ 
ಸಣ್ಣ ಚೂರು ದಾಲ್ಚೀನಿ ,
೨ ಲವಂಗ 
೨ ಬೆಳ್ಳುಳ್ಳಿ ಎಸಳು 
ಸಣ್ಣ ಚೂರು  ಹಸಿ ಶುಂಥಿ
ಗೊಲಿಗಾತ್ರದಷ್ಟು ಹುಣಸೆ ಹುಳಿ .
ಒಗ್ಗರಣೆಗೆ 
೨ ಚಮಚ ಎಣ್ಣೆ ,ಸಾಸಿವೆ ,ಕರಿಬೇವು,
ಮಾಡುವ ವಿಧಾನ 


೧,ಬ್ರೋಕೊಲಿಯನ್ನು ಹೂಕೋಸನ್ನು ಹೆಚ್ಚಿದಂತೆ ಹಚ್ಹಿಕೊಳ್ಳಿ.ಮತ್ತು ಸ್ವಲ್ಪ ಹೊತ್ತು ಉಪ್ಪು ನೀರಲ್ಲಿ ನೆನೆಸಿಡಿ.
೨.ಉಳಿದೆಲ್ಲ ಮಸಾಲೆ ಸಾಮಗ್ರಿಗಳನ್ನು ತರಿ ತರಿಯಾಗಿ ಕ್ಹೊಬ್ಬರಿಯೊಂದಿಗೆ ರುಬ್ಬಿಕೊಳ್ಳಿ 
೩.ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಒಗ್ಗರಿಸಿ ಅದರಲ್ಲಿ ಬ್ರುಕೊಲಿ ಯನ್ನು ಹಾಕಿ.
೪.ಉಪ್ಪು ಸಿಂಪಡಿಸಿ ಕೊಂಚ ಬಾಡಿಸಿ.ಬ್ರುಕೊಲಿ ನೀರು ಬಿಡುತ್ತಲೇ ಮಸಾಲೆ ಸೇರಿಸಿ.
೫.ರುಚಿಗೆ ತಕ್ಕಷ್ಟು ಉಪ್ಪು  ಸೇರಿಸಿ  ಮಸಾಲೆ ಹಸಿ ವಾಸನೆ ಹೋಗುವಾ ತನಕ  ಬೇಯಿಸಿ
ಬ್ರುಕೊಲಿ ಸುಕ್ಕೆ ಚಪಾತಿ ರೊಟ್ಟಿ ಅನ್ನ ಮೂರಕ್ಕೂ ಜೊತೆಯಾಗಬಲ್ಲದು.
(ನೆನಪಿಡಿ - ಬ್ರುಕೋಲಿ  ಬಹು ಬೇಗ ಬೇಯುತ್ತದೆ.ಮತ್ತು ಹೆಚ್ಹು ಬೇಯಿಸಿದಷ್ಟು ಅದರಲ್ಲಿನ ಪೋಷಕಾಂಶಗಳು ಕಡಿಮೆ ಆಗುತ್ತದೆ.)
ಬ್ರುಕೊಲಿ ಅಕ್ಕ ಕೋಲಿಫ್ಲವರ್ ..ಹೂಕೋಸು ಸುಕ್ಕೆ ಕೂಡ ಅಷ್ಟೇ ರುಚಿ ರುಚಿ 

ಕೀವಿ ಹಣ್ಣಿನ ಗೊಜ್ಜು.


೧.ಕೀವಿ ಹಣ್ಣಿನ ಗೊಜ್ಜು.
(ಕೀವಿ ಹಣ್ಣನ್ನು ಚೈನೀಸ್ ಗೂಸ್ ಬೆರ್ರಿ  ಎಂದು ಕರೆಯುತ್ತಾರೆ, ಇದನ್ನು New Zealand ನಲ್ಲಿ ದಾಖಲೆಯ  ಪ್ರಮಾಣದಲ್ಲಿ ಬೆಳೆಯುತ್ತಾರೆ ಆದ್ದರಿಂದ ಅಲ್ಲಿನ ರಾಷ್ಟ್ರೀಯ ಪಕ್ಷಿ ಕೀವಿ ಹೆಸರನ್ನು ಈ ಹಣ್ಣಿಗು ಇಡಲಾಯಿತು.ವಿಟಮಿನ್ ಸಿ ಮತ್ತು ಹಲವು ಪೋಷಕಾಂಶಗಳನ್ನು ಹೊಂದಿರುವ ಹಸಿರು ಹಣ್ಣು  ಇದಾಗಿದೆ.)

ಬೇಕಾಗುವ ಪದಾರ್ಥ ಗಳು 
೨ ಕೀವಿ ಹಣ್ಣುಗಳು 
೧ ಹಸಿಮೆಣಸು 
ಕೊತ್ತಂಬರಿ ಸೊಪ್ಪು ಸ್ವಲ್ಪ 
ಚಿಟಿಕೆ ಇಂಗು 
ಉಪ್ಪು,ಬೆಲ್ಲ ರುಚಿಗೆ 
ಒಗ್ಗರಣೆಗೆ ;ಸಾಸಿವೆ ,ಕರಿಬೇವು ,ಒಣಮೆಣಸು
ಮಾಡುವ ವಿಧಾನ-
೧.ಕೀವಿ ಹಣ್ಣ ನ್ನು ಸಿಪ್ಪೆಯಿಂದ ಬೇರ್ಪಡಿಕೊಳ್ಳಿ.
೨.ಬೆಲ್ಲ ಉಪ್ಪು ,ಹಸಿಮೆಣಸು ,ಇಂಗು ಇವನ್ನು ಒಂದು ಪಾತ್ರೆಯಲ್ಲಿ ಚನ್ನಾಗಿ ಕಲಿಸಿಕೊಳ್ಳಿ .
೩.ಇದಕ್ಕೆ ಕೀವಿ ಹಣ್ಣಿನ ತಿರುಳು ಸೇರಿಸಿ.ಚನ್ನಾಗಿ ಕಿವುಚಿ ,
೪.ಕರಿಬೇವು ಸಾಸಿವೆ ,ಒಣಮೆಣಸಿನ ಚೂರಿನೊಂದಿಗೆ ಒಗ್ಗರಣೆ ಕೊಡಿ.ಸಿಹಿಹುಳಿ ಕೀವಿ ಹಣ್ಣಿನ ಗೊಜ್ಜು ಸಿದ್ದ.
(ನೆನಪಿಡಿ -ಈ ಗೊಜ್ಜು ಮಾಡುವಾಗ ಮಿಕ್ಸರ್  ಅಥವಾ ಬ್ಲೆನ್ದೆರ್ ಬಳಸಬೇಡಿ.ಕೀವಿ ಹಣ್ಣನ್ನು ರುಬ್ಬಿದರೆ ಅದರ ರುಚಿ ಬದಲಾವಣೆ ಗೊಳ್ಳುತ್ತದೆ..)
ಹಣ್ಣುಗಳ ರಾಜ ಮಾವು,ಮತ್ತು ಹುಣಸೆ ಹಣ್ಣು  , ಬಿಂಬಲ್,ಕಮರಾಕ್ಷಿ ,ದ್ರಾಕ್ಷಿ ... ಹುಳಿ ಸಿಹಿ ರುಚಿ ಇರುವ ಎಲ್ಲಾ ಹಣ್ಣಿ ನಲ್ಲಿ ಈ ರುಚಿಯನ್ನು ನೀವು ಪ್ರಯೋಗಿಸಬಹುದು.