ಶುಕ್ರವಾರ, ಫೆಬ್ರವರಿ 15, 2013

ಗೋದಿ ನುಚ್ಚಿನ ಪುಲಾವ್



ಅಂಗಾರಿಕ ಸಂಕಷ್ಟಿಗಳಲ್ಲಿ ಅಮ್ಮ ಮಾಡುತ್ತಿದ್ದ ಫಳಾರದ ತಿಂಡಿ ಇದು, ನನಗೆ ಗಣಪತಿ ಧ್ಯಾನಕ್ಕಿಂತ  ಈ ಮಸಾಲೆ ಉಪ್ಪಿಟ್ಟಿನ ಧ್ಯಾನ..ಮಧ್ಯಾನ್ನದ ಹೊತ್ತು ಘಮ ಘಮಿಸುವ ಕಷಾಯ, ರಾಗಿ ಮಾಲ್ಟ್ ಜೊತೆ ಈ ಉಪ್ಪಿಟ್ಟು ಆಹಾ ನೆನಪು ಮಾಡಿಕೊಂಡರೆ  ಇನ್ನೊಂದು ಸಂಕಷ್ಟಿ ಬರಬಾರದೇ..ಅನಿಸುತ್ತೆ. ಜೊತೆಗೆ ಅಮ್ಮ ಮಾಡುತ್ತಿದ್ದ ಇನ್ನೊಂದು ಸಂಕಷ್ಟಿ ಖಾದ್ಯ ದೂದ್ ಭಾಜಿ ಇದರ ಬಗ್ಗೆ ಮತ್ತೊಮ್ಮೆ ಹೇಳ್ತೇನೆ .ಈಗ ಗೋದಿ ಕಡಿ ಪುಲಾವಿನ ಮೂಡಿನಲ್ಲಿದ್ದೇನೆ ,
ಯುಕೆ ಗೆ ಬಂದ  ನಂತರ ಇಲ್ಲಿನ ಸೂಪರ್ ಮಾರ್ಕೆಟ್ ಗಳಲ್ಲಿ ಭಾರತದ ದಿನಸಿಗಳನ್ನು ಅಥವಾ ಅದಕ್ಕೆ ಹೊಂದಿಕೊಂಡಂತೆ ಇರುವಂಥದನ್ನು ಹುಡುಕುತ್ತಿರುವಾಗ ಸಿಕ್ಕಿದ್ದು ಬುಲ್ಗರ್ ವೀಟ್ .(ಗೋದಿ ನುಚ್ಚು ) ಅಮ್ಮ ಮಾಡುತಿದ್ದ ಮಸಾಲೆ ಉಪ್ಪಿಟ್ಟಿನ ಥೀಮ್ ನಲ್ಲಿ ನನ್ನ improvisations ಸೇರಿಸಿ ಈ ಪುಲಾವ್ ಮಾಡಿದೆ, ತಿಂದ ಪ್ರತಿಯೊಬ್ಬರಿಗೂ ಇದು ಆಪ್ತ ಆಗಿದೆ, ಜೊತೆಗೆ ಅನ್ನ ಒಲ್ಲದವರಿಗೆ , ಅಥವಾ ಒಂದು ಬದಲಾವಣೆ ಹುಡುಕುತ್ತಿರುವರಿಗೆ ವಿಶೇಷವಾಗಿ ಬ್ಯಾಚುಲರ್ಸ್ ಗೆ ಇದು ತುಂಬಾ ಒಳ್ಳೇದು, ಸಮಯ ಉಳಿತಾಯ ದೊಂದಿಗೆ ಆರೋಗ್ಯಕರವೂ ಹೌದು .ಇದನ್ನು ಮಾಡೋಕೆ ........


ಬೇಕಾಗುವ ಸಾಮಗ್ರಿಗಳು 

೨ ಕಪ್ ಗೋದಿ ನುಚ್ಚು 
೨ ಈರುಳ್ಳಿ (ಸಣ್ಣಗೆ ಹೆಚ್ಚಿಕೊಂಡಿದ್ದು )
೨-೩ ಹಸಿಮೆಣಸು 
ಪುದೀನಾ ಮತ್ತು ಕೊತ್ತಂಬರಿಸೊಪ್ಪು 
೨-೩ ಟೊಮೇಟೊ 
 ೧ ಕಪ್ ಮಿಶ್ರ ತರಕಾರಿ (ಹಸಿ ಬಟಾಣಿ,ಗಜ್ಜರಿ ,ಬೀನ್ಸ್ ಹೂಕೋಸು ಆಲುಗಡ್ಡೆ )
೩-೪ ಬೆಳ್ಳುಳ್ಳಿ ಎಸಳು 
ಸಣ್ಣ ಚೂರು ಶುಂಟಿ 
೧ ಚಮಚ ಜೀರಿಗೆ 
ಒಂದು ದಲ್ಚೀನಿ ಚಕ್ಕೆ ,
೩-೪ ಲವಂಗ 
೨ ಯಾಲಕ್ಕಿ (ಅಥವಾ ಯಾವುದೇ ಪುಲಾವ್ ರೆಡಿಮೇಡ್ ಮಸಾಲಾ ಕೂಡ ಬಳಸ  ಬಹುದು )
೪ ಚಮಚ ಎಣ್ಣೆ 
ರುಚಿಗೆ ಉಪ್ಪು 


ಮಾಡುವ ವಿಧಾನ 
೧.ಪ್ರೆಶರ್ ಕುಕ್ಕರಿನಲ್ಲಿ ಎಣ್ಣೆ  ಹಾಕಿ ,ಬಿಸಿ ಆದ ಕೂಡಲೇ ಜೀರಿಗೆ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ 
೨.ಪುದೀನಾ ಕೊತ್ತಂಬರಿ ಸೊಪ್ಪು ,ಶುಂಟಿ,ಬೆಳ್ಳುಳ್ಳಿ ,ಮತ್ತುಳಿದ ಎಲ್ಲ ಮಸಾಲೆಗಳನು ಮಿಕ್ಷಿಯಲ್ಲಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ 
(ಸಣ್ಣಗೆ ಹೆಚ್ಚಿ ,ಮಸಾಲೆಗಳನ್ನು ಪುಡಿ ಮಾಡಿ ಹಾಕಿದರು ನಡೆಯುತ್ತದೆ )
೩.ಹುರಿದ ಈರುಳ್ಳಿ ಯಲ್ಲಿ ,ಈ ಮಸಾಲೆ ಸೇರಿಸಿ ೨ ನಿಮಿಷ ಕೈಯಾಡಿಸಿ .
೪ ತೊಳೆದ ಗೋದಿ ನುಚ್ಚು ಮತ್ತು ತರಕಾರಿಗಳನ್ನು ಕುಕ್ಕರಿನಲ್ಲಿ ಹಾಕಿ, 
೫.  ಈಗ ಉಪ್ಪು ಮತ್ತು ಟೊಮೇಟೊ ಸೇರಿಸಿ ೪ ಕಪ್ ಬಿಸಿನೀರು ಸೇರಿಸಿ ,
೬.ಎರಡು ವಿಸಿಲ್ ಆದ ನಂತರ ಉರಿ ಆರಿಸಿ .
ಬಿಸಿ ಬಿಸಿ ಬುಲ್ಗರ್ ವೀಟ್ ಪಲಾವ್ ಸವಿಯಿರಿ.

ಬುಧವಾರ, ಫೆಬ್ರವರಿ 22, 2012

ತಳ್ಳಲ್ಲಿ ಬೆಂಡೆಕಾಯಿ ಪಲ್ಯ

ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ ,ಅಮ್ಮನಿಗೆ ಆ ಸಮಯದಲ್ಲಿ ಕೈ ಬೆರಳುಗಳ ಗಂಟಿನಲ್ಲಿ ಸಹಿಸಲು ಆಗದಂಥ ನೋವು ಕೈ ಮಡಿಸಲು ಆಗುತ್ತಿರಲಿಲ್ಲ.ಅವರಿವರಲ್ಲಿ ಕೇಳಿದ ನಂತರ ಸವಣೂರು (ಹಾವೇರಿ ಜಿಲ್ಹೆ )ಹತ್ತಿರದ ತಳ್ಳಲ್ಲಿ ಎಂಬ ಊರಲ್ಲಿ ಮದ್ದು ಕೊಡುತ್ತಾರೆ ಎಂಬುದನ್ನು ಖಚಿತ ಪಡಿಸಿಕೊಂಡು ನಾನು ಅಮ್ಮ ,ತಂಗಿ ಮತ್ತು ಸವಣೂರು ತಿರುಗಿ ಗೊತ್ತಿದ್ದ ಹಸೀನಾ ಅಲ್ಲಿಗೆ ಹೋಗಿದ್ದೆವು.ಅದೆಷ್ಟು ಕುಗ್ರಾಮ ಅಷ್ಟೇ ಚಂದ ಬಯಲು ಸೀಮೆಯಾ ಅಂದ ಸವಿಯಲು  ಅಲ್ಲಿಗೆ ಹೋಗಬೇಕು ಅನ್ನಿಸುವ ವಾತಾವರಣ ಮನೆಯ ಮಾಡಿನ ಮೇಲೆ ಒಣಗಿಸಿದ ಕೇರು ಹಣ್ಣಿನ ಸರಗಳು ,ಆ ಮನೆಯ ಮಕ್ಕಳು ಆಯ್ದುಕೊಂಡ ಬಂದ ಅತ್ತಿ ಹಣ್ಣು ,ಮತ್ತು ಮನೆಯ ಸುತ್ತಮುತ್ತಲಿದ್ದ ಕೊಟ್ಟಿಗೆಯ ಘಮ. ಸಂಜೆಗೆ ಧಾರವಾಡ ಆಕಾಶವಾಣಿಯ ಕೃಷಿರಂಗದ ಹಾಡು ಕೇಳುತ್ತಲೇ ಸಿಂಗಲ್ ಆಗಿಬಿಡುವ ಫ್ಯುಸು .ಅದೊಂದು ಚಂದ ಹಳ್ಳಿ ..
ಮದ್ದು ಕೊಡುವ ಅವರ ಈಡಿ ಮನೆಗೆ ಒಂದೇ ೬೦ ವೋಲ್ಟಿನ ಬಲ್ಬು ಅಡಿಗೆ ಮನೆಯಲ್ಲಿ ಹತ್ತಿಕಟ್ಟಿಗೆ ಉರಿ ,ಕೂಡು ಕುಟುಂಬದ ಅಷ್ಟೂ ಮಂದಿಗೆ ರೊಟ್ಟಿ ತಟ್ಟಲು ಸರದಿಯಂತೆ ಕುಳಿತು ಕೊಳ್ಳುತ್ತಿದ್ದ ಓರಗಿತ್ತಿಯರು ,

ಅಲ್ಲೇ ಬೆಂಡೆಕಾಯಿ ಜೊತೆ ನನಗೆ ಮೊದಲ ಪ್ರೇಮವಾಗಿದ್ದು.ಅಷ್ಟೂ ಮಂದಿಗೆ ಒಂದು ಪಲ್ಯ ಸಾಕಾಗದು ಅಂದು ಅವರು ಪುಟ್ಟ ಪುಟ್ಟ ಮಡಿಕೆಗಳಲ್ಲಿ ೫-೬ ಥರ ಪದಾರ್ಥ ಮಾಡಿದ್ದರು.ಆ ದಿನ ಅವರು ಮಾಡಿದ್ದ ಬೆಂಡೆ ಕಾಯಿ ಪಲ್ಯ ಅದೆಷ್ಟು ರುಚಿಯಾಗಿತ್ತು ಅಂದ್ರೆ ನನಗ್ಯಾಕೋ ಆ ದಬರಿ ಖಾಲಿ ಆಗುವ ತನಕ ಏಳುವ  ಮನಸಾಗಲಿಲ್ಲ ನನ್ನ ಅಮ್ಮ ನಾಚಿಗೆ ಹಿಂಜರಿಕೆ ಬೆರೆತ ಭಾವದಿಂದಲೇ ಪ್ರತಿಬಾರಿ ನನ್ನತ್ತ ಅವರತ್ತ ನೋಡುತ್ತಿದ್ದಳು,ನನ್ನ ಕಣ್ಣಲ್ಲೇ ಗದರಿಸಲು ನೋಡಿ ಅವಳ ದೊಡ್ಡ ಕಣ್ಣನ್ನು ಮತ್ತು ದೊಡ್ಡ ಮಾಡಲು ಹೋಗಿ ಸೋತಳು..ನಾನು ಮಾತ್ರ ನಾಚಿಗೆ ಬಿಟ್ಟು ಬೆಂಡೆಕಾಯಿ ಪಲ್ಯ ಮಿದು ಮಿದು ಜೋಳದ ರೊಟ್ಟಿ ರಂಜಕ ಸವಿಯೋದ್ರಲ್ಲಿ ಬ್ಯುಸಿ 

ಅಮ್ಮ ತನ್ನ ಮುಜುಗರ ಹೋಗಲಾಡಿಸಲು ಅವರಲ್ಲಿ ಆ ಪಲ್ಯದ ರೆಸಿಪಿ ಕೇಳುತ್ತಿದ್ದಳು.ಅದೂ ನನ್ನ ತಲೆಯಲ್ಲಿ ಅಚ್ಚಾಗಿತ್ತು ,ಅದರ ನಂತರ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನಾನು ಅಂಥ ಬೆಂಡೆಕಾಯಿ ಪಲ್ಯ ತಿನ್ನಲಿಲ್ಲ..ಮಾತ್ರ ಆ ಬೆಂಡೆಕಾಯಿ ಪಲ್ಯದ ರೆಸಿಪಿಗೆ ಆ ಹಳ್ಳಿಯ ಹೆಸರೇ ಇಟ್ಟೇ.ಮೊನ್ನೆ ಬೆಲ್ಫಾಸ್ಟ್ ಹೋದಾಗ ಇಂಡಿಯನ್ ಶಾಪ್ ನಿಂದ ಒಂದಷ್ಟು ಊರ  ತರಕಾರಿ ತಗೊಂಡ್ ಬಂದೆ ಅದರಲ್ಲಿ ನನ್ನ ಲವ್ಲಿ ಲೇಡಿಸ್ ಫಿಂಗೆರ್ ಕೂಡ ಇತ್ತು.ಮತ್ತೆ ಈ ಪಲ್ಯ ನೆನಪಾಯಿತು  ಸುಮ್ಮನೆ ಟ್ರೈ ಮಾಡಿದೆ.ನೀವು ನಂಬಲ್ಲ ಅದೇ ರುಚಿ ಉಪ್ಪು ಹುಳಿ ಖಾರ ಎಲ್ಲವು ಅಷ್ಟಷ್ಟೇ.ಕಣ್ಣು ಮುಚ್ಹಿ ತಿಂದರೆ ಆ ಹತ್ತಿ ಕಟ್ಟಿಗೆ ಉರಿ ಮುಂದೆ ರೊಟ್ಟಿ ಬಡಿಯುವ  ನಾದ ಕೇಳುತ್ತ ಅಸ್ವಧಿಸಿದ ಬೆಂಡೆ ಮತ್ತೆ ನನ್ನ ನಾಲಿಗೆಯಮೆಲಿದೆಯೇ   ಅನ್ನೋ ಭ್ರಮೆ.ಆ ರೆಸಿಪಿ ನಿಮ್ಮ ಮುಂದೆ ಇಡುವ ಮುಂನ್ನ  ಈ ಕಥೆ ಹೇಳಬೇಕೆನಿಸಿತು  .ಆ ತಳ್ಳಲ್ಲಿ ಬೆಂಡೆಕಾಯಿ ಪಲ್ಯದ ಸವಿ ನೀವೊಮ್ಮೆ ಯಾಕೆ ಸವಿಬಾರದು??
ಬೇಕಾಗುವ ಸಾಮಗ್ರಿ 
೧/೨ ಕಿಲೋ ಬೆಂಡೆಕಾಯಿ 
೪ ಹಸಿಮೆಣಸು 
೧ ಈರುಳ್ಳಿ 
೧ ಟೊಮೇಟೊ 
ಸ್ವಲ್ಪ ಶೇಂಗ ತರಿ 
ರುಚಿಗೆ ಉಪ್ಪು 
ಒಗ್ಗರಣೆಗೆ ಸ್ವಲ್ಪ ಎಣ್ಣೆ ,ಕರಿಬೇವು ,ಜೀರಿಗೆ 

ಮಾಡುವ ವಿಧಾನ 
೧,ಬೆಂಡೆ ಸ್ವಚಮಾಡಿ ತೊಳೆದು ಸಣ್ಣಗೆ ಹಚ್ಚಿಕೊಳ್ಳಿ 
೨,ಕಾವಲಿಯಲ್ಲಿ ಎಣ್ಣೆ ಬಿಸಿಗಿಟ್ಟು ಜೀರಿಗೆ ಕರಿಬೇವು ಹೆಚ್ಚಿದ  ಈರುಳ್ಳಿ ಹಸಿಮೆಣಸು  ಹಾಕಿ ಘಮ ಬರುವಂತೆ ಹುರಿಯಿರಿ 
೩,ಈಗ ಬೆಂಡೆಕಾಯಿ ಹಾಕಿ ಉಪ್ಪು ಸಿಂಪಡಿಸಿ ,ಮುಚ್ಚಳ ಮುಚ್ಹಿ 
೪,೨ ನಿಮಿಚದ ನಂತರ ಹೆಚ್ಚಿದ ಟೊಮೇಟೊ ಸೇರಿಸಿ ಚನ್ನಾಗಿ ಕೈಯ್ಯಾಡಿಸಿ,ಟೊಮೇಟೊ ಸೇರಿಸಿದ ಕೂಡಲೇ ಅಂಟು ಅಂಟು ಆಗಿದ್ದ  ಬೆಂಡೆಕಾಯಿ ಉದುರಾಗುತ್ತದೆ,ಬೆಂಡೆಕಾಯಿ ಬೆಂದ ಕೂಡಲೇ  ಅದಕ್ಕೆ ಶೇಂಗಾ ತರಿ(ಹುರಿದು ತರಿ ಮಾಡಿದ್ದು)ಸೇರಿಸಿ ಮುಚಿಬಿಡಿ ಮತ್ತು ಉರಿ ಆರಿಸಿ.
ಅತಿ ಸರಳ ,ಚಪಾತಿ ಅಥವಾ ರೊಟ್ಟಿಯೊಂದಿಗೆ ಬಹಳ ರುಚಿಸುತ್ತದೆ ,ಜೊತೆಗೆ ಮೆಂತೆಸೊಪ್ಪು ಮೆಣಸಿನ ಹಿಂಡಿ ,ರಂಜಕ(ಕೆಂಪು ಮೆಣಸಿನ ಚಟ್ನಿ)ಶೇಂಗ ,ಗುರೆಳ್ಳು,ಅಗಸಿ  ಚಟ್ನಿಪುಡಿ  ಅವುಗಳ ಮೇಲಷ್ಟು ಒಳ್ಳೆಣ್ಣೆ,  ಕೋಸಂಬರಿ.ಬದನಿ ಪಲ್ಯೆ ...ಆಹಾ  ಹಾ ....ನಿಮ್ಮ ಬಾಯಲ್ಲಿ ನೀರು ಬಂದಿದ್ದರೆ..ಸೀದಾ ಅಡುಗೆ ಮನೆಗೆ ಹೋಗಿ ಮಾಡಿ ತಿನ್ನಿ..

ಮಂಗಳವಾರ, ಫೆಬ್ರವರಿ 7, 2012

ಎಗ್ಗ್ ಬಾಲ್ಟಿ ಕರ್ರಿ



ಈ ಪದಾರ್ಥಕ್ಕೆ ಒಂದು ಸುಂದರ ಇತಿಹಾಸವಿದೆ. ಈ ವಿಧಾನ ಕಾಶ್ಮೀರಿ ಪದ್ಹತಿಯದು, ಪಾಕಿಸ್ತಾನದ ಹಲವು ಭಾಗಗಳಲ್ಲೂ ಇದನ್ನು ಮಾಡುತ್ತಾರಂತೆ,ಅಲ್ಲಿಂದ ಯುರೋಪಿಗೆ ವಲಸೆ ಬಂದ ಕಾಶ್ಮೀರಿಗಳು ಈ ಅಡುಗೆ ವಿಧಾನವನ್ನು ಯುರೋಪಿನಾದ್ಯಂತ ಮನೆಮಾತಾಗಿಸಿದರು.ಬರ್ಮಿಂಗ್ ಹ್ಯಾಮ್ ನಲ್ಲಿ   ಬಾಲ್ಟಿ ಟ್ರಯಾಂಗಲ್ ಎಂಬ ಸ್ಥಳವು ಇದೆ ಇಲ್ಲಿ ಭಾರತೀಯ ಮತ್ತಿತರ ಏಶಿಯ ರಾಷ್ಟ್ರಗಳ ರೆಸ್ಟೋರೆಂಟ್ ಗಳಿವೆ ,ಬಾಲ್ಟಿ ಮಸಾಲೆಗಳನ್ನು ಬಾಟಲಿಯಲ್ಲಿ ತುಂಬಿ ಪ್ರತಿ ಸೂಪರ್ ಮಾರ್ಕೆಟ್ಟು ಮಾರುತ್ತದೆ.ಎಂದರೆ ಆಶ್ಚರ್ಯ ಪಡಬೇಕಿಲ್ಲ .ಅದೂ ಭಾರತೀಯ ಅಡಿಗೆಯ ತಾಕತ್ತು ಮಾತಿನಲ್ಲಿ ವರ್ಣಿಸಲಾದೀತೇ????ಈ ಬಾಲ್ಟಿ ಕರ್ರಿ  ತರಕಾರಿಯಲ್ಲೂ ಮಾಡಬಹುದು ಮೂಲತ ಇದನ್ನು ಚಿಕನ್ ನಲ್ಲಿ ಮಾಡಲಾಗುತ್ತದೆ ,ನಾನು ಎಗ್ಗ್ ನೊಂದಿಗೆ ಪ್ರಯತ್ನಿಸಿದ್ದೇನೆ..ಸವಿದು ನೋಡಿ .ಎಗ್ಗ್ ಬಾಲ್ಟಿ ಕರಿ .
ಬೇಕಾಗುವ ಪದಾರ್ಥಗಳು 
೬ ಮೊಟ್ಟೆ 
೨ ಈರುಳ್ಳಿ 
೪ ಚಮಚ ಎಣ್ಣೆ 
೧ ಸಣ್ಣ ಬೆಳ್ಳುಳ್ಳಿ. ಮತ್ತು ಶುಂಟಿ,
ಕೊತ್ತಂಬರಿ ಸೊಪ್ಪು 
೨ ಟೊಮೇಟೊ 
೪ ಚಮಚ ಟೊಮೇಟೊ ಪ್ಯುರಿ 
ರುಚಿಗೆ ಉಪ್ಪು 

ಮಸಾಲೆ ಸಾಮಗ್ರಿ 

೧/೨ ಚಮಚ ಸಾಸಿವೆ 
೧ ಚಮಚ ಜೀರಿಗೆ 
೧ ಚಮಚ ಕಲೊಂಜಿ (ಈರುಳ್ಳಿ ಬೀಜ)
೧ ಚಮಚ ಸಕ್ಕರೆ 
೨ ಇಂಚು ದಾಲ್ಚೀನಿ
೧ ಚಮಚ ಒಣಗಿದ ಕರಿಬೇವಿನ ಪುಡಿ 
೪ ಯಾಲಕ್ಕಿ 
೫-೬ ಲವಂಗ 
೧ ಚಮಚ ಸೋಂಪು
೭-೮ ಒಣಮೆಣಸು 
ಇವಿಷ್ಟನ್ನು ಹದವಾಗಿ ಹುರಿದು ಪುಡಿ ಮಾಡಿಕೊಳ್ಳಿ (ಸಕ್ಕರೆಯನ್ನು ಪುಡಿ ಮಾಡುವಾಗ ಸೇರಿಸಿರಿ ಹುರಿಯುವ ಅಗತ್ಯವಿಲ್ಲ )
ಮಾಡುವ ವಿಧಾನ 

೧,ಮೊಟ್ಟೆಯನ್ನು ಬೇಯಿಸಿ ಮತ್ತು ಸಿಪ್ಪೆ ಸುಲಿದು ,ಅರ್ಧ ಭಾಗ ಮಾಡಿಕೊಳ್ಳಿ 
೨ .ಅಗಲ ತಳದ ಪಾತ್ರೆಯನ್ನು ಬಿಸಿಗಿಟ್ಟು ಎಣ್ಣೆ ಹಾಕಿ ಅದರಲ್ಲಿ ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚನ್ನಾಗಿ ಹುರಿಯಿರಿ 
೩  .ಈರುಳ್ಳಿಯೊಂದಿಗೆ ಜಜ್ಜಿದ ಬೆಳ್ಳುಳ್ಳಿ ಮತ್ತು ಶುಂತಿಯನ್ನು ಸೇರಿಸಿ ಘಮ ಬರುವಂತೆ ಹುರಿಯಿರಿ 
೪ ,ಪುಡಿ ಮಾಡಿಕೊಂಡ ಮಸಾಲೆಯನ್ನು ಸೇರಿಸಿ ,ಈ ಸಮಯದಲ್ಲಿ ಮಸಾಲೆ ಸೀದು ಹೋಗದಂತೆ ಎಚ್ಚರ ವಹಿಸುವುದು ಅಗತ್ಯ 
೫.ಈಗ ಮೊಟ್ಟೆಯನ್ನು ಸೇರಿಸಿ .ಮಸಾಲೆ ಮೊಟ್ಟೆಗೆ ಹೊಂದಿಕೊಳ್ಳುವಂತೆ ಕೈಯ್ಯಾಡಿಸಿ
೬.ಟೊಮೇಟೊ ಪ್ರುರಿ ಸೇರಿಸಿ ,ಮತ್ತು ಸ್ವಲ್ಪ ನೀರು,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ .
೭.ಕುದಿ ಬರುವಾಗ ಹೆಚ್ಚಿದ ಟೊಮೇಟೊ ,ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಹಿ ,ಸಣ್ಣ ಉರಿಯಲ್ಲಿ ೫ ನಿಮಿಷ  ಬೇಯಿಸಿ.
ರುಚಿ ರುಚಿ ಎಗ್ಗ್ ಬಾಲ್ಟಿ  ಕರಿ ಸಿದ್ಧ ಇದು ನಾನ್,ಕುಲ್ಚ ಗಳಿಗೆ ಹೇಳಿಮಾಡಿಸಿದ ಜೋಡಿ ,

ಭಾನುವಾರ, ಫೆಬ್ರವರಿ 5, 2012

ಅಂಜಾಕ್ ಬಿಸ್ಕೆಟ್



ಅದು ಮೊದಲ ಮಹಾಯುದ್ಧದ ಸಮಯ ,ಆಸ್ಟ್ರೇಲಿಯನ್ ಸೈನ್ಯದಲ್ಲಿ ಅನ್ಜಕ್ ಟ್ರೂಪ್ ಅನ್ನುವವರು ತಮ್ಮ ಸೈನಿಕರಿಗೆ ತಮ್ಮಲ್ಲಿ ಅಳಿದುಳಿದ ದಿನಸಿಗಳಲ್ಲೇ ರುಚಿಯಾದದದ್ದು ಪೌಷ್ಟಿಕವಾದದ್ದು ಮತ್ತು ತುಂಬಾ ದಿನಗಳ ಕಾಲ ಇರುವಂಥಹ ಬಿಸ್ಕೆಟ್ ಒಂದನ್ನು ತಯಾರಿಸಿದರು.ಕಾಲಕ್ರಮೇಣ ಈ ಬಿಸ್ಕೆಟ್ ಆಸ್ಟ್ರೇಲಿಯಾದ ಜನಪ್ರಿಯ ತಿಂಡಿಯಾಯಿತು.
ಆಸ್ಟ್ರೇಲಿಯದ  ಸೈನಿಕರು ಇಂದಿಗೂ ತಮ್ಮ ಮನೇ ಮಂದಿಯಿಂದ ಉಡುಗೊರೆಯ ರೂಪದಲ್ಲಿ ಈ ಬಿಸ್ಕಿಟ್ ಪಡೆಯುತ್ತಾರೆ ಹಾಲು ,ಮೊಟ್ಟೆ ಗಳಂಥ ವಸ್ತುಗಳು ಬೇಕಾಗಿಲ್ಲ ಆದಕಾರಣ ನಿಶ್ಚಿಂತೆಯಿಂದ ಇದನ್ನು ಪ್ರಯಾಣದಲ್ಲಿ ಒಯ್ಯಬಹುದು .ಈ ರೆಸಿಪೆ ಮತ್ತು ವಿವರಗಳನ್ನು ನನ್ನ ಮಗ ತನ್ನ ಲೈಬ್ರರಿ ಯಿಂದ ತಂದ step by step cooking for kids ಎಂಬ ಪುಸ್ತಕದಿಂದ ಪಡೆದುಕೊಂಡೆ..ತುಂಬಾ ಸರಳ ಮತ್ತು ರುಚಿ ರುಚಿ ,ಮಕ್ಕಳೊಂದಿಗೆ ಮಾಡಬಹುದಾದ ಅಡುಗೆ ಇದು..
ಬೇಕಾಗುವ ಪದಾರ್ಥಗಳು.
೪ ಚಮಚ ಬೆಣ್ಣೆ 
೧ ಟಿ ಚಮಚ ಬೇಕಿಂಗ್ ಪೌಡರ್ 
೨ ಚಮಚ ಕಾರ್ನ್ ಸಿರಪ್ (ಹಸಿ ಮುಸುಕಿನ ಜೋಳವನ್ನು ಮಿಕ್ಸಿ ಮಾಡಿಕೊಂಡು ಬಳಸಬಹುದು )
೧ ಕಪ್ ಮೈದಾ
೧ ಕಪ್ ಓಟ್ಸ್
೧/೪ ಕಪ್ ಸಕ್ಕರೆ 
ಮಾಡುವ ವಿಧಾನ 
೧,ಪಾತ್ರೆಯೊಂದರಲ್ಲಿ ಮೈದಾ ,ಸಕ್ಕರೆ ,ಓಟ್ಸ್ ಮಿಶ್ರ ಮಾಡಿಕೊಳ್ಳಿ 
೨,ಮತ್ತೊಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಕರಗಿಸಿ ಅದರಲ್ಲಿ ಕಾರ್ನ್ ಸಿರಪ್ ,ಮತ್ತು ಬೇಕಿಂಗ್ ಸೋಡಾ ಬೆರೆಸಿ ಮತ್ತು ಇದನ್ನು ಮೈದಾ ಸಕ್ಕರೆ ಓಟ್ಸ್ ಮಿಶ್ರಣಕ್ಕೆ ಸೇರಿಸಿ ಕಲಿಸಿಕೊಳ್ಳಿ.
೩.ಅಲುಮಿನಿಯಂ ಫಾಯಿಲ್  ಮೇಲೆ ಬೆಣ್ಣೆ ಸವರಿ ,ಕಲಸಿಕೊಂಡ ಮಿಶ್ರಣವನ್ನು ಬಿಸ್ಕಿಟ್ ರೂಪದಲ್ಲಿ  ಇಡಿ,
೪,೧೮೦ ಡಿಗ್ರಿ ತಾಪಮಾನದಲ್ಲಿ ೩೫-೪೦ ನಿಮಿಷ ಬೇಕ್ ಮಾಡಿ ,
ಮತ್ತು ಐತಿಹಾಸಿಕ ಬಿಸ್ಕಿಟ್ ಸವಿಯಿರಿ.

ಬುಧವಾರ, ಫೆಬ್ರವರಿ 1, 2012

ಪಾಲ್ ಚಾಕ್

ಪರದೇಶದಲ್ಲಿ  ಭಾರತೀಯರ ವಾರಾಂತ್ಯ  ಗಳಿಗೆ ಅದರದೇ ಆದ ಒಂದು ಚಂದ ಇದೆ..ಬೇರೆಯಾವ ಮನರಂಜನೆ ಇರದ ಕಾರಣ ಪರಸ್ಪರರ ಮನೆಗೆ ಹೋಗುವುದು ಮತ್ತು ಜೊತೆಗೂಡಿ ಊಟ ಮಾಡುವುದು ನಮ್ಮ ಆದ್ಯತೆಗಳಲ್ಲಿ ಒಂದು..ಈಗೀಗ ಅದೆಷ್ಟು ಅಭ್ಯಾಸ ಆಗಿದೆ ಅಂದ್ರೆ ಶುಕ್ರವಾರ ಯಾರ ಕಾಲ್ ,ಇನ್ವಿಟೇಶನ್ ಬರ್ಲಿಲ್ಲ  ಅಂದ್ರೆ ಏನೋ ತಪ್ಪಿದ ಹಾಗೆ ನಮ್ಮ ಮನೆಗೆ ಕರೆಯಲಿಲ್ಲವಲ್ಲ ಅನ್ನೋ ಕಿಟಿ ಪಿಟಿ ಬೇರೆ ,ಹಾಗೆ ಪರನಾಡಿನ ತಾಯಿನೆಲದ  ಸ್ನೇಹಿತರ ಮನೆಗೆ ಉಟಕ್ಕೆ ಹೋದಾಗ ಸವಿದ ರುಚಿಗಳನ್ನು ನಾನೂ ಮನೆಗೆ ಬಂದು ಪ್ರಯತ್ನಿಸುತ್ತೇನೆ..ಹಾಗೆ ನಾ ತುಂಬಾ ಇಷ್ಟಾ ಪಟ್ಟು ಸವಿದ ಮತ್ತು ಮಾಡಿದ ಸಿಹಿ ಇದು ,
ಓಡಿಸ್ಸಾದ ಕೆಲವು ಭಾಗಗಳಲ್ಲಿ ಈ ಸಿಹಿ ತುಂಬಾ ಪ್ರಸಿದ್ಧ ,ಕಡಿಮೆ ಸಿಹಿ ಇರುವುದರಿಂದ ಸಿಹಿ ಆಗದವರಿಗೂ  ಇದು ಇಷ್ಟಾ ಆಗುತ್ತೆ.ತುಂಬಾ ಸರಳ ,ಮಲೆನಾಡು ಕರಾವಳಿಯಲ್ಲಿ ಕಾಯಿ ಹಾಲು ಅಕ್ಕಿ,ರಾಗಿ,ಕುವೆ ಹಿಟ್ಟು ಗಳಿಂದ ಮಾಡುವ ಹಾಲುಬಾಯಿ ಯಂತೆ ಕಾಣುವ ಇದರ ಹೆಸರು ಪಾಲ್ ಚಾಕ್ ,

ಬೇಕಾಗುವ ಸಾಮಗ್ರಿಗಳು 
೧/೨ ಲಿಟರ್ ಹಾಲು 
ಒಂದು ಹಿಡಿ ಅಕ್ಕಿ 
೨೫೦ ಗ್ರಾಂ ಸಕ್ಕರೆ 
ತೇಜ್ ಪತ್ತಾ,
ಕ್ಹೊಬ್ಬರಿ ಚೂರುಗಳು 


ಮಾಡುವ ವಿಧಾನ .
೧.ಅಕ್ಕಿಯನ್ನು ರಾತ್ರಿಯೇ ನೆನೆಸಿಡಿ (ಕನಿಷ್ಠ ೫-೬ ಘಂಟೆ )ಮತ್ತು ಮುಂಜಾನೆ ಸಣ್ಣ ದಾಗಿ ರುಬ್ಬಿಕೊಳ್ಳಿ ಇದು ನೀರುದೋಸೆ ಹಿಟ್ಟಿನ ಹದ ಇರಲಿ ,
೨.ಹಾಲನ್ನು ಕಾಯಿಸಲು ಇಡಿ.ಇನ್ನೇನು ಹಾಲು   ಉಕ್ಕಿ ಬರುತ್ತೆ ಅನ್ನುವ ಸಮಯದಲ್ಲಿ ರುಬ್ಬಿಕೊಂಡ ಅಕ್ಕಿಯ ಮಿಶ್ರಣವನ್ನು ಅದಕ್ಕೆ ಹಾಕಿ ಕದಕುತ್ತ ಇರಿ ,ಕೈ ಬಿಟ್ಟರೆ ತಳ ಹಿಡಿಯುವ ಸಂಭವ ಜಾಸ್ತಿ 
೩.೩-೪ ನಿಮಿಷದಲ್ಲಿ ಇದು ಘಟ್ಟಿ ಯಾಗಿ  ಬರುತ್ತದೆ ಆಗ ಸಕ್ಕರೆ ಸೇರಿಸಿ ,ಮತ್ತು ಮಂದ ಉರಿಯಲ್ಲಿ ಸ್ವಲ್ಪ ಸಮಯ ಬೇಯಿಸಿ 
೪,ಈಗ ಕೊಬ್ಬರಿ ಚೂರು ,ಮತ್ತು ತೇಜ್ ಪತ್ತಾ (ದಲ್ಚೀನಿ ಎಲೆ )ಸೇರಿಸಿ..
೫.ತಟ್ಟೆಗೆ ಸುರುವಿ ತಣಿಸಿ , ಹಲ್ವಾ ದಂತೆ ಕತ್ತರಿಸಿ ಸವಿಯಿರಿ.
ಹೀಗೆ ಕತ್ತರಿಸುವುದರಿಂದ ಇದನ್ನು ಪಾಲ್ ಚಾಕ್ ಅನ್ನುತ್ತಾರೆ,ಸುಮ್ಮನೆ ಪಾಯಸ ದಂತೆಯು ಇದನ್ನು ಸವಿಯಬಹುದು ಆಗ ಅದು ಕೇವಲ ಪಾಲ, ಸಮನ್ಯಾವಾಗಿ ಓಡಿಸ್ಸಾ ದಲ್ಲಿ ಉದ್ದಿನ ದೋಸೆಯೊಂದಿಗೆ ಈ ಪಾಕ್ ಚಾಕ್ ಮಾಡುತ್ತಾರಂತೆ.
.ಇಲ್ಲಿ ದಾಲ್ಚೀನಿ ಎಲೆಯ ಮಂದ ಘಮವೇ ಸಿಹಿಯ ಸ್ಟ್ರಾಂಗ್ ಪಾಯಿಂಟ್ ,. ನಾನು ಡಾರ್ಕ್ ಚಾಕ್ಲೆಟ್ ಪುಡಿ ಹಾಕಿ ಗಾರ್ನಿಶ್ ಮಾಡಿದ್ದೇನೆ ,ನೀವು ನಿಮ್ಮ ಅಭಿರುಚಿಗನುಗುಣವಾಗಿ ಸಿಂಗರಿಸಿ..

ಗುರುವಾರ, ಜನವರಿ 19, 2012

ಸಾಬಕ್ಕಿ(ಸಾಬುದಾನೆ) ಇಡ್ಲಿ

ಸಾಬಕ್ಕಿ(ಸಾಬುದಾನೆ) ಇಡ್ಲಿ ...ಇದನ್ನ ಯಾರ ಮುಂದೆ ಹೇಳಿದರು ಹೊಸದು ಎಂಬ ಉದ್ಗಾರ ಬಂದಿತ್ತು ,ಸಾಬುದಾನೆ ಇಡ್ಲಿ ನಾನು ಮೊತ್ತ ಮೊದಲು ಸವಿದಿದ್ದು ಧಾರವಾಡ ದಲ್ಲಿ ನಾನು ಪೇಯಿಂಗ್ ಗೆಸ್ಟ್ ಆಗಿ ಇದ್ದ ದುರ್ಗಾ ಶಾನಭಾಗ್ ಅವರ ಮನೆಯಲ್ಲಿ ,ಸಾಬುದಾನೆ ಇಡ್ಲಿಯೊಂದಿಗೆ ಹೀರೆಕಾಯಿ ಸಿಪ್ಪೆಯ ಚಟ್ನಿ ಮ್ಯಾಚಿಂಗು,,,ನಿಮ್ಮ ಬ್ರೇಕ್ ಫಾಸ್ಟ್ ಲಿಸ್ಟ್ ನಲ್ಲಿ ಈ ಹೊಸತಿಂಡಿಗೊಂದು ಅವಕಾಶ ಕೊಟ್ಟು ನೋಡಬಾರದೇಕೆ.???

ಬೇಕಾಗುವ ಸಾಮಗ್ರಿಗಳು

೧/೪ ಸಾಬಕ್ಕಿ,
೩ ಚಮಚ ಚಿರೋಟಿ ರವೆ
೧ ಕಪ್ ಮಜ್ಜಿಗೆ/ಮೊಸರು
೧ ಈರುಳ್ಳಿ
೧ ಟೊಮೇಟೊ
ಸ್ವಲ್ಪ ನೆಲಗಡಲೆ ಬೀಜ (ಶೇಂಗ )
ಸಣ್ಣ ಚೂರು ಶುಂಟಿ ,
ಒಂದು ಹಸಿಮೆಣಸು
೧/೨ ಚಮಚ ಜೀರಿಗೆ
ಸ್ವಲ್ಪ ಒಣ ದ್ರಾಕ್ಷಿ ,ಗೋಡಂಬಿ
ಹಸಿ ಬಟಾಣಿ ,ಕ್ಯಾರೆಟ್ ,ಕಾರ್ನ್ ನಿಮಗೆ ಬೇಕೆನಿಸಿದಷ್ಟು,
ಕೊತ್ತಂಬರಿಸೊಪ್ಪು ಸ್ವಲ್ಪ
ಉಪ್ಪು ರುಚಿಗೆ

 ಮಾಡುವ ವಿಧಾನ

೧.ಸಾಬಕ್ಕಿ +ಶುಂಟಿ +ನೆಲಗಡಲೆ +ಜೀರಿಗೆ+ರವೆ   ಇವಿಷ್ಟನ್ನು ರಾತ್ರಿ ಮೊಸರು/ಮಜ್ಜಿಗೆಯಲ್ಲಿ ನೆನೆಸಿಡಿ .
೨.ಮುಂಜಾನೆ ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಟೊಮೇಟೊ ,ಕೊತ್ತಂಬರಿಸೊಪ್ಪು,ಹಸಿ ಬಟಾಣಿ ,ಕಾರ್ನ್,ದ್ರಾಕ್ಷಿ ,ಗೋಡಂಬಿ ಉಪ್ಪು ಎಲ್ಲವನ್ನು ಸೇರಿಸಿ,
೩,ಈಗ ಇಡ್ಲಿ ಅಟ್ಟ/ಕುಕ್ಕರ್ ನಲ್ಲಿ   ೧೫ -೧೭ ನಿಮಿಷಗಳ ಕಾಲ ಬೇಯಿಸಿ ಈ ಪ್ರಮಾಣದಲ್ಲಿ ೧೬ ಇಡ್ಲಿಗಳನ್ನು ತಯಾರಿಸಬಹುದು.

ಉಪವಾಸ ವಾರ,ಒಪ್ಪತ್ತಿನಲ್ಲಿ ಹೆಚ್ಹಾಗಿ ಸಾಬಕ್ಕಿ/ಸಬ್ಬಕ್ಕಿ /ಸಾಬುದಾನೆ ಬಳುಸುತ್ತಾರೆ ಖೀರು ಉಸಲಿ ಗೆ ಬದಲಾಗಿ ಈದನ್ನು ನೀವು ಪ್ರಯೋಗಿಸಬಹುದು ,ಆಗ ಈರುಳ್ಳಿ ಯನ್ನು ಹಾಕದಿದ್ದರೆ ಆಯಿತು,ರಾತ್ರಿಯೇ ನೆನೆಸಬೇಕೆನ್ದೆನು ಇಲ್ಲ ೪-೬ ಘಂಟೆಗಳಷ್ಟು ಸಾಬಕ್ಕಿ ನೆಂದರಾಯಿತು,

ಸಾಬಕ್ಕಿ ಇದರ ಮೂಲ..

ಸಾಬುದಾನೆ ,ಸಬ್ಬಕ್ಕಿಯನ್ನು ನಾನು ಚಿಕ್ಕಂದಿನಿಂದಲೂ ತುಂಬಾ ಇಷ್ಟ ಪಡುತಿದ್ದೆ,ಅದರ ಪಾಯಸವನ್ನು ಗುಳ್ಳಿ ಪಾಯಸ ಅನ್ನೋದು ನಮ್ಮಅಭ್ಯಾಸವಾಗಿತ್ತು,ಆದರೆ ಅದನ್ನು ಯಾವುದರಿಂದ ತಯಾರಿಸುತ್ತಾರೆ ಎಂಬುದು ಮಾತ್ರ ನನಗೆ  ಕುತೂಹಲ ಹುಟ್ಟಿಸಿದ ವಿಷಯ ,
ಸಬ್ಬಕ್ಕಿಯನ್ನು ಮರಗೆಣಸು,ಅಥವಾ ಕಪ್ಪಗಡ್ಡೆ,topica root , ಎಂದು ಕರೆಯಲ್ಪಡುವ ಕಂದಮೂಲದಿಂದ ತೆಗೆದ ಹಿಟ್ಟಿನಿಂದ ತಯಾರಿಸುತ್ತಾರೆ  ಇದೊಂಥರ ಕುವೆ ಹಿಟ್ಟನ್ನು ತಯಾರಿಸಿದಂತೆ ,ನಿಮಗೆ ಈ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದಾರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ..

ಇಲ್ಲದಿದ್ದರೆ ಇಡ್ಲಿ ಮಾಡಿ ,ತಿನ್ನುವಾಗ ನನ್ನ ಒಮ್ಮೆ ನೆನಪಿಸಿಕೊಳ್ಳಿ...


http://www.sabuindia.com/sago2.htm

ಟೊಮೇಟೊ ಸಂತೋಷ್

ಅಯ್ಯೋ ಇದೆಂತ ಹೆಸರು ,ಟೊಮೇಟೊ ಸಂತೋಷ್??ಈ ಪದಾರ್ಥವನ್ನು ನೆಂಜಿಕೊಂಡ ಕೂಡಲೇ ಉಂಟಾದ ಭಾವವವನ್ನೇ ಈ  ರೆಸಿಪಿ ಗೆ ಕೊಟ್ಟಿರಬಹುದು ಅನ್ನೋದು ನನ್ನ ಅನಿಸಿಕೆ..
ತುಂಬಾ ಹಳೆಯ ರೆಸಿಪಿ ಇದು ಅಂತ ಅಮ್ಮ ನನ್ನ ಅತ್ತೆ ಎಲ್ಲರು ಹೇಳಿದರು ಆದರು ನನಗೆ ಯಾವತ್ತು ಸವಿದ ನೆನಪಿರಲಿಲ್ಲ ,ಬ್ಲಾಗ್ ಗೆಳತಿ ನಿಯಾ ಈ ಅಡಿಗೆಯ ಫೋಟೋ ಪೋಸ್ಟ್ ಮಾಡೋ ತನಕ ಈ ಸಂತೋಷ್ ನನ್ನಿಂದ ದೂರವಿದ್ದದ್ದು ಹೇಗೆ??ಎಂಬುದರ ಬಗ್ಗೆ ನನಗೆ ಆಶ್ಚರ್ಯವಿದೆ.
ದೋಸೆ ಚಪಾತಿ ಗಳಿಗೆ ಮಾಮೂಲು ಭಾಜಿ ,ಪಲ್ಯಗಳನ್ನು ಜೊತೆ ಮಾಡಿ ಮಾಡಿ ಬೇಸರ ಬಂದಿದ್ದರೆ ಟೊಮೇಟೊ ಸಂತೋಷ ನಿಮಗೆ ಬೆಸ್ಟ್ ಚಾಯ್ಸ್ .

ಸಂತೋಷ್ ಗೆ ಬೇಕಾದ ಸಾಮಗ್ರಿಗಳು.

೧/೨ ಕೆಜಿ ಟೊಮೇಟೊ 
೨ ಹದಗಾತ್ರದ  ಈರುಳ್ಳಿ 
೧/೨ ಕಪ್ ಹಸಿ ಕೊಬ್ಬರಿ ತುರಿ
೧/೪ ಚಮಚ ಅರಿಶಿನ 
೨ ಚಮಚ ಒಣಮೆಣಸಿನ ಪುಡಿ 
ರುಚಿಗೆ ಉಪ್ಪು,
ಒಗ್ಗರಣೆಗೆ 
ಮೆಂತೆ ,ಜೀರಿಗೆ ,ಸಾಸಿವೆ. ಕರಿಬೇವು ,ಒಣಮೆಣಸು 
ಎಣ್ಣೆ .

ಮಾಡುವ ವಿಧಾನ .
೧.ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ 
೨.ಟೊಮೇಟೊ ಗಳನ್ನೂ (೧-೪  ರಂತೆ )ಹೆಚ್ಚಿಕೊಳ್ಳಿ 
೩.ಸ್ವಲ್ಪ ಎಣ್ಣೆಯಲ್ಲಿ ಘಮ ಬರುವತನಕ ಈರುಳ್ಳಿಯನ್ನು ಬಾಡಿಸಿ(ಒಗ್ಗರಣೆಗು ಎಣ್ಣೆ ಬಳಸುವುದರಿಂದ ಸ್ವಲ್ಪವೇ ಸಾಕು)
೪.ಹಸಿ ಕೊಬ್ಬರಿ+ಅರಿಶಿನ +ಒಣಮೆಣಸಿನ ಪುಡಿ ಈ ಮೂರನ್ನು ಸ್ವಲ್ಪ ನೀರಿನೊಂದಿಗೆ  ನುಣ್ಣನೆ ರುಬ್ಬಿಕೊಳ್ಳಿ 
೫.ಹುರಿದ ಈರುಳ್ಳಿಗೆ ಟೊಮೇಟೊ ಸೇರಿಸಿ  ಮತ್ತು ಉಪ್ಪು ಸಿಂಪಡಿಸಿ ಮುಚ್ಚಳ ಮುಚ್ಚಿ .
೬,ಬೆಂದ ಟೊಮೇಟೊ ಹೊಳುಗಳಿಗೆ ತಯಾರಿಸಿಕೊಂಡ ಮಸಾಲೆ ಸೇರಿಸಿ ಮತ್ತು ಎರಡು ಹೊಂದಿಕೊಳ್ಲೋ ತನಕ ಚನ್ನಾಗಿ ಕೈಯ್ಯಾಡಿಸಿ,
೭,ಮಸಾಲೆ ಟೊಮೇಟೊ ಎರಡು ಹೊಂದಿಕೊಂಡು ತಳ ಬಿಡಲು ಶುರುಮಾಡಿದಾಗ ,ಮೆಂತೆ ,ಸಾಸಿವೆ ,ಜೀರಿಗೆ ಕರಿಬೇವು ಕ್ರಮವಾಗಿ ಸೇರಿಸಿ ಒಗ್ಗರಣೆ ಕೊಡಿ.
ನಿಮಗೆ ಸಿಹಿ ಇಷ್ಟವಿದ್ದರೆ  ಬೆಲ್ಲವನ್ನು ಸೇರಿಸಬಹುದು.ರುಚಿಗೆ ತಕ್ಕಂತೆ ಉಪ್ಪು ಖಾರವನ್ನು ಹೊಂದಿಸಿಕೊಳ್ಳಬಹುದು.
.ದೋಸೆ ಚಪಾತಿಗೆ ನೆಂಜಿಕೊಂಡು ತಿನ್ನುವಾಗ,,ಸಂತೋಷದಿಂದ ನನ್ನನ್ನೊಮ್ಮೆ ನೆನೆಸಿಕೊಂಡರೆ ನನಗೂ ಸಂತೋಷ.