ಬುಧವಾರ, ಫೆಬ್ರವರಿ 22, 2012

ತಳ್ಳಲ್ಲಿ ಬೆಂಡೆಕಾಯಿ ಪಲ್ಯ

ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ ,ಅಮ್ಮನಿಗೆ ಆ ಸಮಯದಲ್ಲಿ ಕೈ ಬೆರಳುಗಳ ಗಂಟಿನಲ್ಲಿ ಸಹಿಸಲು ಆಗದಂಥ ನೋವು ಕೈ ಮಡಿಸಲು ಆಗುತ್ತಿರಲಿಲ್ಲ.ಅವರಿವರಲ್ಲಿ ಕೇಳಿದ ನಂತರ ಸವಣೂರು (ಹಾವೇರಿ ಜಿಲ್ಹೆ )ಹತ್ತಿರದ ತಳ್ಳಲ್ಲಿ ಎಂಬ ಊರಲ್ಲಿ ಮದ್ದು ಕೊಡುತ್ತಾರೆ ಎಂಬುದನ್ನು ಖಚಿತ ಪಡಿಸಿಕೊಂಡು ನಾನು ಅಮ್ಮ ,ತಂಗಿ ಮತ್ತು ಸವಣೂರು ತಿರುಗಿ ಗೊತ್ತಿದ್ದ ಹಸೀನಾ ಅಲ್ಲಿಗೆ ಹೋಗಿದ್ದೆವು.ಅದೆಷ್ಟು ಕುಗ್ರಾಮ ಅಷ್ಟೇ ಚಂದ ಬಯಲು ಸೀಮೆಯಾ ಅಂದ ಸವಿಯಲು  ಅಲ್ಲಿಗೆ ಹೋಗಬೇಕು ಅನ್ನಿಸುವ ವಾತಾವರಣ ಮನೆಯ ಮಾಡಿನ ಮೇಲೆ ಒಣಗಿಸಿದ ಕೇರು ಹಣ್ಣಿನ ಸರಗಳು ,ಆ ಮನೆಯ ಮಕ್ಕಳು ಆಯ್ದುಕೊಂಡ ಬಂದ ಅತ್ತಿ ಹಣ್ಣು ,ಮತ್ತು ಮನೆಯ ಸುತ್ತಮುತ್ತಲಿದ್ದ ಕೊಟ್ಟಿಗೆಯ ಘಮ. ಸಂಜೆಗೆ ಧಾರವಾಡ ಆಕಾಶವಾಣಿಯ ಕೃಷಿರಂಗದ ಹಾಡು ಕೇಳುತ್ತಲೇ ಸಿಂಗಲ್ ಆಗಿಬಿಡುವ ಫ್ಯುಸು .ಅದೊಂದು ಚಂದ ಹಳ್ಳಿ ..
ಮದ್ದು ಕೊಡುವ ಅವರ ಈಡಿ ಮನೆಗೆ ಒಂದೇ ೬೦ ವೋಲ್ಟಿನ ಬಲ್ಬು ಅಡಿಗೆ ಮನೆಯಲ್ಲಿ ಹತ್ತಿಕಟ್ಟಿಗೆ ಉರಿ ,ಕೂಡು ಕುಟುಂಬದ ಅಷ್ಟೂ ಮಂದಿಗೆ ರೊಟ್ಟಿ ತಟ್ಟಲು ಸರದಿಯಂತೆ ಕುಳಿತು ಕೊಳ್ಳುತ್ತಿದ್ದ ಓರಗಿತ್ತಿಯರು ,

ಅಲ್ಲೇ ಬೆಂಡೆಕಾಯಿ ಜೊತೆ ನನಗೆ ಮೊದಲ ಪ್ರೇಮವಾಗಿದ್ದು.ಅಷ್ಟೂ ಮಂದಿಗೆ ಒಂದು ಪಲ್ಯ ಸಾಕಾಗದು ಅಂದು ಅವರು ಪುಟ್ಟ ಪುಟ್ಟ ಮಡಿಕೆಗಳಲ್ಲಿ ೫-೬ ಥರ ಪದಾರ್ಥ ಮಾಡಿದ್ದರು.ಆ ದಿನ ಅವರು ಮಾಡಿದ್ದ ಬೆಂಡೆ ಕಾಯಿ ಪಲ್ಯ ಅದೆಷ್ಟು ರುಚಿಯಾಗಿತ್ತು ಅಂದ್ರೆ ನನಗ್ಯಾಕೋ ಆ ದಬರಿ ಖಾಲಿ ಆಗುವ ತನಕ ಏಳುವ  ಮನಸಾಗಲಿಲ್ಲ ನನ್ನ ಅಮ್ಮ ನಾಚಿಗೆ ಹಿಂಜರಿಕೆ ಬೆರೆತ ಭಾವದಿಂದಲೇ ಪ್ರತಿಬಾರಿ ನನ್ನತ್ತ ಅವರತ್ತ ನೋಡುತ್ತಿದ್ದಳು,ನನ್ನ ಕಣ್ಣಲ್ಲೇ ಗದರಿಸಲು ನೋಡಿ ಅವಳ ದೊಡ್ಡ ಕಣ್ಣನ್ನು ಮತ್ತು ದೊಡ್ಡ ಮಾಡಲು ಹೋಗಿ ಸೋತಳು..ನಾನು ಮಾತ್ರ ನಾಚಿಗೆ ಬಿಟ್ಟು ಬೆಂಡೆಕಾಯಿ ಪಲ್ಯ ಮಿದು ಮಿದು ಜೋಳದ ರೊಟ್ಟಿ ರಂಜಕ ಸವಿಯೋದ್ರಲ್ಲಿ ಬ್ಯುಸಿ 

ಅಮ್ಮ ತನ್ನ ಮುಜುಗರ ಹೋಗಲಾಡಿಸಲು ಅವರಲ್ಲಿ ಆ ಪಲ್ಯದ ರೆಸಿಪಿ ಕೇಳುತ್ತಿದ್ದಳು.ಅದೂ ನನ್ನ ತಲೆಯಲ್ಲಿ ಅಚ್ಚಾಗಿತ್ತು ,ಅದರ ನಂತರ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನಾನು ಅಂಥ ಬೆಂಡೆಕಾಯಿ ಪಲ್ಯ ತಿನ್ನಲಿಲ್ಲ..ಮಾತ್ರ ಆ ಬೆಂಡೆಕಾಯಿ ಪಲ್ಯದ ರೆಸಿಪಿಗೆ ಆ ಹಳ್ಳಿಯ ಹೆಸರೇ ಇಟ್ಟೇ.ಮೊನ್ನೆ ಬೆಲ್ಫಾಸ್ಟ್ ಹೋದಾಗ ಇಂಡಿಯನ್ ಶಾಪ್ ನಿಂದ ಒಂದಷ್ಟು ಊರ  ತರಕಾರಿ ತಗೊಂಡ್ ಬಂದೆ ಅದರಲ್ಲಿ ನನ್ನ ಲವ್ಲಿ ಲೇಡಿಸ್ ಫಿಂಗೆರ್ ಕೂಡ ಇತ್ತು.ಮತ್ತೆ ಈ ಪಲ್ಯ ನೆನಪಾಯಿತು  ಸುಮ್ಮನೆ ಟ್ರೈ ಮಾಡಿದೆ.ನೀವು ನಂಬಲ್ಲ ಅದೇ ರುಚಿ ಉಪ್ಪು ಹುಳಿ ಖಾರ ಎಲ್ಲವು ಅಷ್ಟಷ್ಟೇ.ಕಣ್ಣು ಮುಚ್ಹಿ ತಿಂದರೆ ಆ ಹತ್ತಿ ಕಟ್ಟಿಗೆ ಉರಿ ಮುಂದೆ ರೊಟ್ಟಿ ಬಡಿಯುವ  ನಾದ ಕೇಳುತ್ತ ಅಸ್ವಧಿಸಿದ ಬೆಂಡೆ ಮತ್ತೆ ನನ್ನ ನಾಲಿಗೆಯಮೆಲಿದೆಯೇ   ಅನ್ನೋ ಭ್ರಮೆ.ಆ ರೆಸಿಪಿ ನಿಮ್ಮ ಮುಂದೆ ಇಡುವ ಮುಂನ್ನ  ಈ ಕಥೆ ಹೇಳಬೇಕೆನಿಸಿತು  .ಆ ತಳ್ಳಲ್ಲಿ ಬೆಂಡೆಕಾಯಿ ಪಲ್ಯದ ಸವಿ ನೀವೊಮ್ಮೆ ಯಾಕೆ ಸವಿಬಾರದು??
ಬೇಕಾಗುವ ಸಾಮಗ್ರಿ 
೧/೨ ಕಿಲೋ ಬೆಂಡೆಕಾಯಿ 
೪ ಹಸಿಮೆಣಸು 
೧ ಈರುಳ್ಳಿ 
೧ ಟೊಮೇಟೊ 
ಸ್ವಲ್ಪ ಶೇಂಗ ತರಿ 
ರುಚಿಗೆ ಉಪ್ಪು 
ಒಗ್ಗರಣೆಗೆ ಸ್ವಲ್ಪ ಎಣ್ಣೆ ,ಕರಿಬೇವು ,ಜೀರಿಗೆ 

ಮಾಡುವ ವಿಧಾನ 
೧,ಬೆಂಡೆ ಸ್ವಚಮಾಡಿ ತೊಳೆದು ಸಣ್ಣಗೆ ಹಚ್ಚಿಕೊಳ್ಳಿ 
೨,ಕಾವಲಿಯಲ್ಲಿ ಎಣ್ಣೆ ಬಿಸಿಗಿಟ್ಟು ಜೀರಿಗೆ ಕರಿಬೇವು ಹೆಚ್ಚಿದ  ಈರುಳ್ಳಿ ಹಸಿಮೆಣಸು  ಹಾಕಿ ಘಮ ಬರುವಂತೆ ಹುರಿಯಿರಿ 
೩,ಈಗ ಬೆಂಡೆಕಾಯಿ ಹಾಕಿ ಉಪ್ಪು ಸಿಂಪಡಿಸಿ ,ಮುಚ್ಚಳ ಮುಚ್ಹಿ 
೪,೨ ನಿಮಿಚದ ನಂತರ ಹೆಚ್ಚಿದ ಟೊಮೇಟೊ ಸೇರಿಸಿ ಚನ್ನಾಗಿ ಕೈಯ್ಯಾಡಿಸಿ,ಟೊಮೇಟೊ ಸೇರಿಸಿದ ಕೂಡಲೇ ಅಂಟು ಅಂಟು ಆಗಿದ್ದ  ಬೆಂಡೆಕಾಯಿ ಉದುರಾಗುತ್ತದೆ,ಬೆಂಡೆಕಾಯಿ ಬೆಂದ ಕೂಡಲೇ  ಅದಕ್ಕೆ ಶೇಂಗಾ ತರಿ(ಹುರಿದು ತರಿ ಮಾಡಿದ್ದು)ಸೇರಿಸಿ ಮುಚಿಬಿಡಿ ಮತ್ತು ಉರಿ ಆರಿಸಿ.
ಅತಿ ಸರಳ ,ಚಪಾತಿ ಅಥವಾ ರೊಟ್ಟಿಯೊಂದಿಗೆ ಬಹಳ ರುಚಿಸುತ್ತದೆ ,ಜೊತೆಗೆ ಮೆಂತೆಸೊಪ್ಪು ಮೆಣಸಿನ ಹಿಂಡಿ ,ರಂಜಕ(ಕೆಂಪು ಮೆಣಸಿನ ಚಟ್ನಿ)ಶೇಂಗ ,ಗುರೆಳ್ಳು,ಅಗಸಿ  ಚಟ್ನಿಪುಡಿ  ಅವುಗಳ ಮೇಲಷ್ಟು ಒಳ್ಳೆಣ್ಣೆ,  ಕೋಸಂಬರಿ.ಬದನಿ ಪಲ್ಯೆ ...ಆಹಾ  ಹಾ ....ನಿಮ್ಮ ಬಾಯಲ್ಲಿ ನೀರು ಬಂದಿದ್ದರೆ..ಸೀದಾ ಅಡುಗೆ ಮನೆಗೆ ಹೋಗಿ ಮಾಡಿ ತಿನ್ನಿ..

5 ಕಾಮೆಂಟ್‌ಗಳು:

  1. ನಮ್ಮ ಅಡಿಗೆ ಮನೆಗೆ ಒಂದು ಹೊಸ ಅತಿಥಿ. ತಳ್ಳಲ್ಲಿ ಬೆಂಡೆಕಾಯಿ ಪಲ್ಯ. ಪ್ರಯೋಗ ಪ್ರಸಂಗ.
    ===
    ಅಂತು ಅಂತಗಿದ್ದ ಬೆಂಡೆಕಾಯಿ ಉದುರಾಗುತ್ತದೆ=ಅಂಟು ಅಂಟಾಗಿದ್ದ ಬೆಂಡೆಕಾಯಿ ಉದುರಾಗುತ್ತದೆ,

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೀಗೆ ಕಾಮೆಂಟ್ ಮಾಡಿದರೆ ..ಬರೆದದದ್ದು ಸಾರ್ಥಕ ,ಅದನ್ನು ಸರಿ ಮಾಡಿದ್ದೇನೆ..ಅಂತು - ಇಂತೂ ......ಧನ್ಯವಾದ..ಪುಷ್ಪರಾಜ್ ಅವರೇ..

      ಅಳಿಸಿ
  2. ಕಾವ್ಯ ಭೋಜನಾಲಯದಲ್ಲಿ ಅಡುಗೆ ರುಚಿಯೂ ಬೇಕು. ಅದು ಬಡಿಸಿದಷ್ಟೂ ಇನ್ನಷ್ಟು ಬಡಿಸಿ ಎಂದಂತಿದೆ ನಿಮ್ಮ " ತಳ್ಳಲ್ಲಿ ಬೆಂಡೆಕಾಯಿ ಪಲ್ಯ" ಹದವಾದ ಉಪ್ಪು, ಕೊಲೆಶ್ಟ್ರಾಲ್ ಇಲ್ಲದ ಎಣ್ಣೆ, ಮೃಷ್ಟಾನ್ನ ಭೋಜನಕ್ಕೆ ತೃಪಿ ಬಂತು. ಚೆನ್ನಾಗಿದೆ ಬರಹ.

    ಪ್ರತ್ಯುತ್ತರಅಳಿಸಿ
  3. Went through all the Recipes Amita....enjoyed reading them. u write so well. u make cooking sound like a prayer..where as, i HATE cooking..always looking for ways and means to avoid cooking...yeah and i am not ashamed at all to share this...
    :-)
    malathi akka

    ಪ್ರತ್ಯುತ್ತರಅಳಿಸಿ