ಶುಕ್ರವಾರ, ಫೆಬ್ರವರಿ 15, 2013

ಗೋದಿ ನುಚ್ಚಿನ ಪುಲಾವ್



ಅಂಗಾರಿಕ ಸಂಕಷ್ಟಿಗಳಲ್ಲಿ ಅಮ್ಮ ಮಾಡುತ್ತಿದ್ದ ಫಳಾರದ ತಿಂಡಿ ಇದು, ನನಗೆ ಗಣಪತಿ ಧ್ಯಾನಕ್ಕಿಂತ  ಈ ಮಸಾಲೆ ಉಪ್ಪಿಟ್ಟಿನ ಧ್ಯಾನ..ಮಧ್ಯಾನ್ನದ ಹೊತ್ತು ಘಮ ಘಮಿಸುವ ಕಷಾಯ, ರಾಗಿ ಮಾಲ್ಟ್ ಜೊತೆ ಈ ಉಪ್ಪಿಟ್ಟು ಆಹಾ ನೆನಪು ಮಾಡಿಕೊಂಡರೆ  ಇನ್ನೊಂದು ಸಂಕಷ್ಟಿ ಬರಬಾರದೇ..ಅನಿಸುತ್ತೆ. ಜೊತೆಗೆ ಅಮ್ಮ ಮಾಡುತ್ತಿದ್ದ ಇನ್ನೊಂದು ಸಂಕಷ್ಟಿ ಖಾದ್ಯ ದೂದ್ ಭಾಜಿ ಇದರ ಬಗ್ಗೆ ಮತ್ತೊಮ್ಮೆ ಹೇಳ್ತೇನೆ .ಈಗ ಗೋದಿ ಕಡಿ ಪುಲಾವಿನ ಮೂಡಿನಲ್ಲಿದ್ದೇನೆ ,
ಯುಕೆ ಗೆ ಬಂದ  ನಂತರ ಇಲ್ಲಿನ ಸೂಪರ್ ಮಾರ್ಕೆಟ್ ಗಳಲ್ಲಿ ಭಾರತದ ದಿನಸಿಗಳನ್ನು ಅಥವಾ ಅದಕ್ಕೆ ಹೊಂದಿಕೊಂಡಂತೆ ಇರುವಂಥದನ್ನು ಹುಡುಕುತ್ತಿರುವಾಗ ಸಿಕ್ಕಿದ್ದು ಬುಲ್ಗರ್ ವೀಟ್ .(ಗೋದಿ ನುಚ್ಚು ) ಅಮ್ಮ ಮಾಡುತಿದ್ದ ಮಸಾಲೆ ಉಪ್ಪಿಟ್ಟಿನ ಥೀಮ್ ನಲ್ಲಿ ನನ್ನ improvisations ಸೇರಿಸಿ ಈ ಪುಲಾವ್ ಮಾಡಿದೆ, ತಿಂದ ಪ್ರತಿಯೊಬ್ಬರಿಗೂ ಇದು ಆಪ್ತ ಆಗಿದೆ, ಜೊತೆಗೆ ಅನ್ನ ಒಲ್ಲದವರಿಗೆ , ಅಥವಾ ಒಂದು ಬದಲಾವಣೆ ಹುಡುಕುತ್ತಿರುವರಿಗೆ ವಿಶೇಷವಾಗಿ ಬ್ಯಾಚುಲರ್ಸ್ ಗೆ ಇದು ತುಂಬಾ ಒಳ್ಳೇದು, ಸಮಯ ಉಳಿತಾಯ ದೊಂದಿಗೆ ಆರೋಗ್ಯಕರವೂ ಹೌದು .ಇದನ್ನು ಮಾಡೋಕೆ ........


ಬೇಕಾಗುವ ಸಾಮಗ್ರಿಗಳು 

೨ ಕಪ್ ಗೋದಿ ನುಚ್ಚು 
೨ ಈರುಳ್ಳಿ (ಸಣ್ಣಗೆ ಹೆಚ್ಚಿಕೊಂಡಿದ್ದು )
೨-೩ ಹಸಿಮೆಣಸು 
ಪುದೀನಾ ಮತ್ತು ಕೊತ್ತಂಬರಿಸೊಪ್ಪು 
೨-೩ ಟೊಮೇಟೊ 
 ೧ ಕಪ್ ಮಿಶ್ರ ತರಕಾರಿ (ಹಸಿ ಬಟಾಣಿ,ಗಜ್ಜರಿ ,ಬೀನ್ಸ್ ಹೂಕೋಸು ಆಲುಗಡ್ಡೆ )
೩-೪ ಬೆಳ್ಳುಳ್ಳಿ ಎಸಳು 
ಸಣ್ಣ ಚೂರು ಶುಂಟಿ 
೧ ಚಮಚ ಜೀರಿಗೆ 
ಒಂದು ದಲ್ಚೀನಿ ಚಕ್ಕೆ ,
೩-೪ ಲವಂಗ 
೨ ಯಾಲಕ್ಕಿ (ಅಥವಾ ಯಾವುದೇ ಪುಲಾವ್ ರೆಡಿಮೇಡ್ ಮಸಾಲಾ ಕೂಡ ಬಳಸ  ಬಹುದು )
೪ ಚಮಚ ಎಣ್ಣೆ 
ರುಚಿಗೆ ಉಪ್ಪು 


ಮಾಡುವ ವಿಧಾನ 
೧.ಪ್ರೆಶರ್ ಕುಕ್ಕರಿನಲ್ಲಿ ಎಣ್ಣೆ  ಹಾಕಿ ,ಬಿಸಿ ಆದ ಕೂಡಲೇ ಜೀರಿಗೆ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ 
೨.ಪುದೀನಾ ಕೊತ್ತಂಬರಿ ಸೊಪ್ಪು ,ಶುಂಟಿ,ಬೆಳ್ಳುಳ್ಳಿ ,ಮತ್ತುಳಿದ ಎಲ್ಲ ಮಸಾಲೆಗಳನು ಮಿಕ್ಷಿಯಲ್ಲಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ 
(ಸಣ್ಣಗೆ ಹೆಚ್ಚಿ ,ಮಸಾಲೆಗಳನ್ನು ಪುಡಿ ಮಾಡಿ ಹಾಕಿದರು ನಡೆಯುತ್ತದೆ )
೩.ಹುರಿದ ಈರುಳ್ಳಿ ಯಲ್ಲಿ ,ಈ ಮಸಾಲೆ ಸೇರಿಸಿ ೨ ನಿಮಿಷ ಕೈಯಾಡಿಸಿ .
೪ ತೊಳೆದ ಗೋದಿ ನುಚ್ಚು ಮತ್ತು ತರಕಾರಿಗಳನ್ನು ಕುಕ್ಕರಿನಲ್ಲಿ ಹಾಕಿ, 
೫.  ಈಗ ಉಪ್ಪು ಮತ್ತು ಟೊಮೇಟೊ ಸೇರಿಸಿ ೪ ಕಪ್ ಬಿಸಿನೀರು ಸೇರಿಸಿ ,
೬.ಎರಡು ವಿಸಿಲ್ ಆದ ನಂತರ ಉರಿ ಆರಿಸಿ .
ಬಿಸಿ ಬಿಸಿ ಬುಲ್ಗರ್ ವೀಟ್ ಪಲಾವ್ ಸವಿಯಿರಿ.